ನಾಳೆ ಬಿ.ವಿಮಲದಾಸ್ ಸೇವಾ ಪುರಸ್ಕಾರ

ದಾವಣಗೆರೆ, ಆ. 31- ಜಾಗೃತ ಮಹಿಳಾ ಸಂಘ, ಕೌಟುಂಬಿಕ ಸಲಹಾ ಕೇಂದ್ರ ಮತ್ತು ಸ್ವಾಧಾರ ಗೃಹದ ವತಿಯಿಂದ ನಾಡಿದ್ದು ದಿನಾಂಕ 2ರಂದು ಬಿ.ವಿಮಲದಾಸ್ ಸೇವಾ ಪುರಸ್ಕಾರ ಸಮಾರಂಭ  ಹಮ್ಮಿಕೊಳ್ಳಲಾಗಿದೆ ಎಂದು ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿ ಅಮಿನಾಬಾನು ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಾಗೃತ ಮಹಿಳಾ ಸಂಘ ಸ್ಥಾಪಿಸಿ, ಸಾವಿರಾರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದ ದಿ. ಬಿ.ವಿಮಲದಾಸ್ ಅವರ ಹೆಸರಿನಲ್ಲಿ ಈ ಸೇವಾ ಪುರಸ್ಕಾರ  ಆರಂಭಿಸಲಾಗಿದೆ ಎಂದು ಹೇಳಿದರು.

 ಹೊನ್ನಾಳಿ ಜನರಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿ.ನಾಗರತ್ನ ಅವರಿಗೆ ಪ್ರಥಮ ವರ್ಷದ ಸೇವಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.  ಹೊನ್ನಾಳಿ ಜನರಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗರತ್ನ ಅವರು ಕೊರೊನಾ ಸಮಯದಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಹಾಕುವ ಮೂಲಕ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಪ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದಿದ್ದಾರೆ ಎಂದು ವಿವರಿಸಿದರು.

ಸೆ.2ರಂದು ಬೆಳಿಗ್ಗೆ 11.30 ಗಂಟೆಗೆ ಜಾಗೃತ ಮಹಿಳಾ ಸಂಘದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಡಿಆರ್‌ಎಂ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಶಕುಂತಲಾ ಗುರುಸಿದ್ದಯ್ಯ, ಎಸ್‌ಎಸ್‌ ಮೆಡಿಕಲ್ ಕಾಲೇಜು ಉಪ ಪ್ರಾಂಶುಪಾಲ ರಾದ ಡಾ.ಶಶಿಕಲಾ ಕೃಷ್ಣಮೂರ್ತಿ , ನಿವೃತ್ತ ಉಪನ್ಯಾಸಕರಾದ ಶೋಭಾ ಬಸವರಾಜ್, ಬಸವರಾಜ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

1980ರ ದಶಕದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗಿ ನಡೆಯುತ್ತಿದ್ದ ವರದಕ್ಷಿಣ ಕಿರುಕುಳಗಳ ಬಗ್ಗೆ ಪ್ರತಿಭಟಿಸಿ, ಮಹಿಳೆಯರ ದನಿಯಾಗಲು ಸಮಾನ ಮನಸ್ಕರು ಸೇರಿಕೊಂಡು ಎವಿಕೆ ಕಾಲೇಜಿನ ಕೊಠಡಿಯಲ್ಲಿಯಲ್ಲಿಯೇ ಜಾಗೃತ ಮಹಿಳಾ ಸಂಘವನ್ನು ಬಿ.ವಿಮಲಾದಾಸ್ ಅವರು ಆರಂಭಿಸಿದ್ದರು. ಈ ಸಂಘ ಇಂದು ಬೃಹತ್ ಮಟ್ಟದಲ್ಲಿ ಬೆಳೆದು 10 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಾಗೃತ ಮಹಿಳಾ ಸಂಘದ ಅಧ್ಯಕ್ಷೆ ಉಮಾ ವೀರಭದ್ರಪ್ಪ, ನಿರ್ದೇಶಕಿ ಸತ್ಯಭಾಮ ಇತರರು ಉಪಸ್ಥಿತರಿದ್ದರು.

error: Content is protected !!