ಕಾವೇರಿಯನ್ನು ತ.ನಾಡಿಗೆ ಹರಿಸಿರುವುದಕ್ಕೆ ಖಂಡನೆ

ಕಾವೇರಿಯನ್ನು ತ.ನಾಡಿಗೆ ಹರಿಸಿರುವುದಕ್ಕೆ ಖಂಡನೆ

ದಾವಣಗೆರೆ, ಆ.31- ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಅವರು, ರಾಜ್ಯದ ಜನರ ಹಿತ ಕಾಯದ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವಿದೆ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯುಸೆಕ್ಸ್ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗುವುದನ್ನು ಬಿಟ್ಟು, ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ಮಳೆ ಕೊರತೆ ಕಾರಣ ಈ ವರ್ಷದಲ್ಲಿ ನೆರವಿಗೆ ಬರುವಂತೆ ಹಾಗೂ  ಸಂಕಷ್ಟದ ಸೂತ್ರವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು. ರಾಜ್ಯದ ಎಲ್ಲಾ ಶಾಸಕರು, ಸಂಸದರು ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಒತ್ತಾಯಿಸಬೇಕಿತ್ತು ಎಂದು ಹೇಳಿದರು.

ಸಕಾಲಕ್ಕೆ ಮಳೆ ಬಾರದ ಇಂತಹ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳೆಂದು ತಿಳಿದುಕೊಳ್ಳದೇ ನೀರಿಗಾಗಿ ಒತ್ತಾಯಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಕಿವಿ ಹಿಂಡಿ ಮನವರಿಕೆ ಮಾಡಿಕೊಡಬೇಕು. ಅಲ್ಲದೇ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವುದನ್ನು ಬಿಟ್ಟು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನಗಳ ಕಾಲ ಬಿಟ್ಟರೆ ರೈತರ ಬೆಳೆಗೆ ನೀರು ಸಿಗುವುದಿರಲಿ, ಮುಂದೆ ಕುಡಿಯಲು ಸಹ ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದನ್ನು ರಾಜ್ಯ ಸರ್ಕಾರ ಅರಿಯಬೇಕಾಗಿದೆ ಎಂದು ಹೇಳಿದರು.

ವೇದಿಕೆ ಪದಾಧಿಕಾರಿಗಳಾದ ಸಿದ್ದೇಶ್, ಎಸ್. ದಯಾನಂದ, ಎಂ. ರವಿ, ಅಮ್ಜದ್ ಅಲಿ, ಕೆ.ಹೆಚ್. ಮೆಹಬೂಬ್, ಗದಿಗೆಪ್ಪ, ಫಾರುಖ್ ಪಟೇಲಿ, ಶಹಬಾಜ್, ಅಜಮ್ ಅಲಿ, ಬಾಬುರಾವ್, ರಮೇಶ್, ಚಂದ್ರಶೇಖರ್ ಕೆ. ಗಣಪ, ವಿನಯಕುಲಕರ್ಣಿ, ಹುಲಿಗೆಪ್ಪ, ಎಂ. ದರ್ಶನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!