ಮಾಯಕೊಂಡ, ಆ.30- ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ಬಡವರ ಆರ್ಥಿಕಾಭಿವೃದ್ಧಿಗೆ ಉತ್ತಮ ಮಾರ್ಗವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ದಾವಣಗೆರೆ ತಾಲ್ಲೂಕು ಮಾಯಕೊಂಡ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಮಹಿಳೆಯರಿಗೆ ಅದೃಷ್ಟದ ದಿನ. ಮೈಸೂರಿನಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಿಂದ ರಾಜ್ಯದ ಪ್ರತಿಯೊಬ್ಬ ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗಲಿದೆ. ಇದಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮಿಹೆಬ್ಬಾಳ್ಕರ್ ಅವರಿಗೆ ಶುಭ ಹಾರೈಸಿದರು.
ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿ ರುವ ಎಲ್ಲಾ ಮಹಿಳೆಯರ ಖಾತೆಗೆ 2000 ರೂ. ಜಮಾ ಮಾಡುವುದು ಅಧಿಕಾರಿಗಳ ಜವಾಬ್ದಾರಿ ಯಾಗಿದ್ದು, ಯಾವುದೇ ಕಾರಣಕ್ಕೂ ಮಹಿಳೆಯ ರಿಂದ ದೂರುಗಳು ಬರದಂತೆ ನೋಡಿಕೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಇಒ ರಾಮಭೋವಿ, ಉಪತಹಶೀಲ್ದಾರ್ ಹಾಲೇಶಪ್ಪ, ಸಿಡಿಪಿಒ ಶಶಿಕುಮಾರ್, ಗ್ರಾಪಂ ಅಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಪಿಡಿಒ ನಾಗರಾಜ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ಗೋಪಾಲ್, ರುದ್ರೇಶ್, ಗ್ರಾಪಂ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಇದ್ದರು.