ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ

ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಸೇವೆ

ಹರಿಹರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

ಹರಿಹರ, ಅ. 29 – ಪೊಲೀಸ್ ಇಲಾಖೆ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಜನಸ್ನೇಹಿಯಾಗಿ ಸೇವೆ ನೀಡುತ್ತದೆ ಎಂದು ದಾವಣಗೆರೆ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. 

ನಗರದ ಪೊಲೀಸ್ ಠಾಣೆಗೆ ಆಗಮಿಸಿ ಸಿಬ್ಬಂದಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಹರಿಹರದಲ್ಲಿ ಬಹಳ ಮುಖ್ಯವಾಗಿ ಶಾಲಾ ವಲಯಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಸಂಚಾರಿ ಪೊಲೀಸ್ ಠಾಣೆ ಹಾಗೂ ಸಿ.ಸಿ. ಕ್ಯಾಮರಾ ಅಳವಡಿಕೆ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ನಗರದ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ 1400 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬಸ್ ಗಳು ಬರುತ್ತಿವೆ. ಇಲ್ಲಿಗೆ ಬರುವ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ಹರಿಸಲಾಗುವುದು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತೊಂದರೆಯಾಗುವುದನ್ನು ತಡೆಯಲು ಹೆಚ್ಚಿನ ಭದ್ರತೆ ಕಲ್ಪಿಸಲಾಗುವುದು ಎಂದರು.

ಮರಳು ಮತ್ತು ಇಟ್ಟಿಗೆ ವ್ಯವಹಾರ ವಹಿವಾಟಿನ ವಿಚಾರಗಳು ಕೇವಲ ಪೊಲೀಸ್ ಇಲಾಖೆಗೆ ಒಂದೇ ಸಂಬಂಧಿಸಿದ್ದಲ್ಲ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಬರುವ ಅಧಿಕಾರಿಗಳ ಕರ್ತವ್ಯವೂ ಮುಖ್ಯ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರದಲ್ಲಿ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಠಾಣೆಯಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲ. ಸಿಬ್ಬಂದಿ ಕೊರತೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಕ್ರಮ ಆಗಬೇಕಿದೆ. ಆದರೂ, ಸಮಸ್ಯೆ ಬಗೆಹರಿಸಲು ಮುಂದಾಗಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಹಾಗೂ ಹರಿಹರ ಠಾಣೆಯ ಸಿಪಿಐ ಯಶವಂತ್ ಕುಮಾರ್, ಪಿಎಸ್ಐ ಪ್ರವೀಣ್ ಕುಮಾರ್, ಎ.ಎಸ್.ಐ ರಾಜಶೇಖರಯ್ಯ, ವಿಜಯಕುಮಾರ್, ಮಲ್ಲೇಶಪ್ಪ ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ದೇವರಾಜ್, ಮಂಜುನಾಥ್ ಕ್ಯಾತಪ್ಪನವರ್ ಕರಿಯಪ್ಪ, ಸಿದ್ದರಾಜ್, ತಿಪ್ಪಣ್ಣ ಇತರರು ಹಾಜರಿದ್ದರು.

error: Content is protected !!