ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಕಾರ್ಯ ಮಾನವ ಕುಲಕ್ಕೆ ಶಕ್ತಿ ತರುವ ಕೆಲಸ

ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಕಾರ್ಯ ಮಾನವ ಕುಲಕ್ಕೆ ಶಕ್ತಿ ತರುವ ಕೆಲಸ

ಶಿವಮೊಗ್ಗದಲ್ಲಿನ ವಚನ ನೃತ್ಯ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಶ್ಲ್ಯಾಘನೆ

ಶಿವಮೊಗ್ಗ ಆ.29-  ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮೊನ್ನೆ ನಡೆದ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನವನ್ನು ಸಾಣೇ ಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿ  ಉದ್ಘಾಟಿಸಿದರು.

ತರಳಬಾಳು ಹಿರಿಯ ಗುರುಗಳು ಬಹಳ ವರ್ಷಗಳ ಹಿಂದೆಯೇ ಬಸವಣ್ಣ ನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದು, ಕರ್ನಾಟಕದಲ್ಲಿ ಒಂದು ದಾಖಲೆಯೇ ಆಗಿತ್ತು, ಈಗ ಮಾಧ್ಯಮ ಗಳು ಬಹಳಷ್ಟು ಪ್ರಭಾವ ಹೊಂದಿವೆ. ಅಂಗೈಯಲ್ಲೇ ಇಡೀ ಪ್ರಪಂಚವನ್ನು ನೋ ಡಬಹುದು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 

 ಆಗ ಇಂತಹ ಅವಕಾಶ ಇರದೇ ಇದ್ದರೂ,  ಗುರುಗಳು ಬಸವ ತತ್ವವನ್ನು ಪ್ರಚಾರ ಮಾಡಿದರು. ಬೇರೆ ಬೇರೆ ರಾಜ್ಯಗಳಲ್ಲಿ ನಾಟಕಗಳನ್ನು ಅಭಿನಯಿಸಿ ದರು. ಅದರಿಂದ ಸ್ಫೂರ್ತಿಯನ್ನು ಪಡೆದ ನಾವು ರಂಗಭೂಮಿಯನ್ನು ಸದ್ಭಳಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ಈ ಅಭಿಯಾನ ದೊಡ್ಡ ತಪಸ್ಸು, ನಮ್ಮ ಶಿವಮೊಗ್ಗದಲ್ಲಿ ವಚನ ನೃತ್ಯರೂಪಕ ಮಾಡಲಿಕ್ಕೆ ಅವಕಾಶ ಮಾಡಿದ್ದಕ್ಕೆ ತುಂಬಾ ಸಂತೋಷವಾಯಿತು. ಈ ವಚನ ನೃತ್ಯದಲ್ಲಿ ಭಾಗವಹಿಸುವ ಕಲಾವಿದರು ಬಹಳಷ್ಟು ಪರಿಶ್ರಮ ಹಾಕಿದ್ದಾರೆ. 11 ಸಾವಿರ ಕಿಲೋಮೀಟರ್ ಪರ್ಯಟನೆ ಮಾಡಿ ನೃತ್ಯದ ಮೂಲಕ ತಮ್ಮ ಜೀವನವನ್ನು ಬದಲಾವಣೆ ಮಾಡಿಕೊಂಡು ಅತ್ಯುತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ ಎಂದರು.

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ `ಅಟ್ಯಾಚ್ಡ್ ಬಾತ್ ರೂಂ, ಡಿಟ್ಯಾಚ್ಡ್ ಫ್ಯಾಮಿಲಿ’ ಅಂತ.  ನಾವೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗ್ತಾ ಇದ್ದೇವೆ. ಹಿಂದೆಲ್ಲಾ ಅವಿಭಕ್ತ ಕುಟುಂಬಗಳಿದ್ದವು. ಒಂದೇ ಮನೆಯಲ್ಲಿ ಅನೇಕ ಜನರು ವಾಸ ಮಾಡ್ತಾ ಇದ್ದರು. ಈಗೆಲ್ಲಾ ಪ್ರತಿಯೊಬ್ಬರಿಗೂ ಒಂದೊಂದು ರೂಂ ಬೇಕು ಎನ್ನುವ ಸಂಸ್ಕೃತಿ ನಮ್ಮಲ್ಲಿ ಆಗ್ತಾ ಇದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ತತ್ವಗಳು ನೃತ್ಯ, ನಾಟಕದ ಮುಖಾಂತರ ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿರುವ ಕಾರ್ಯ  ಇಡೀ ಮಾನವ ಕುಲಕ್ಕೆ ಶಕ್ತಿ ತರುವಂಥ ಕೆಲಸವಾಗಿದೆ ಎಂದು ರಾಘವೇಂದ್ರ ಹೇಳಿದರು.

ವಿಧಾನ ಪರಿಷತ್ ಸದಸ್ಯ ರುದ್ರೇ ಗೌಡ್ರು ಮಾತನಾಡಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಇಡೀ ರಾಷ್ಟ್ರದಾದ್ಯಂತ ಹಮ್ಮಿಕೊಂಡಿದ್ದಾರೆ. ಬಸವಣ್ಣನವರ ಕಾಲದಲ್ಲಾದ ಸಾಮಾಜಿಕ ಕ್ರಾಂತಿಯ ಪರಿಚಯ ಮಾಡುವ ಕೆಲಸವನ್ನು ಪೂಜ್ಯರು ನಿರಂತರವಾಗಿ ಮಾಡ್ತಾ ಬಂದಿದ್ದಾರೆ ಎಂದರು. 

ಶೃತಿ ಆದರ್ಶ ಪ್ರಾರ್ಥಿಸಿದರೆ, ಬಾಳೆಕಾಯಿ ಮೋಹನ್ ಸ್ವಾಗತಿಸಿದರು. ಸಾಸ್ವೆಹಳ್ಳಿ ಸತೀಶ್ ನಿರೂಪಿಸಿದರು. ರುದ್ರೇಶ್ ವಂದಿಸಿದರು. ವೇದಿಕೆಯ ಮೇಲೆ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಜ್ಯೋತಿ ಪ್ರಕಾಶ್, ಎಸ್. ಪಿ. ದಿನೇಶ್, ಸತೀಶ್ ಮತ್ತಿತರರಿದ್ದರು.  

error: Content is protected !!