ರಾಣೇಬೆನ್ನೂರು, ಆ. 29- ಧರ್ಮ ಮನುಷ್ಯರನ್ನು ಭಗವಂತರನ್ನಾಗಿಸುವ ಶಕ್ತಿ ಹೊಂದಿದೆ. ಪಾಪ ಆ ಶಕ್ತಿಯನ್ನು ನಾಶ ಮಾಡುತ್ತದೆ. ಅಹಿಂಸೆ, ಶಾಂತಿ, ಸಮಾನತೆ, ಸಹಜೀವನ, ಸೌಹಾರ್ದತೆ ಇವು ಧರ್ಮ ಕಲಿಸುವ ಪಾಠಗಳಾಗಿವೆ. ಭಗವಂತರಾಗುವ ಪ್ರಯತ್ನಕ್ಕೆ ಈ ಪಾಠಗಳ ಅವಶ್ಯಕತೆ ಇದೆ ಎಂದು ಜೈನ ಮುನಿ ಆಚಾರ್ಯ ಶ್ರೀ ಮಹೇಂದ್ರಸಾಗರ ಸುರೀಶ್ವರಜೀ ನುಡಿದರು.
ಶ್ರೀಗಳು ರಂಗನಾಥ ನಗರದ ಜೈನ ಮಂದಿರದಲ್ಲಿ ನಡೆದ ಮಹಾಮೃತ್ಯುಂಜಯ ಜಪದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೂರದರ್ಶನ, ಭಗವಂತ ಮತ್ತು ಗುರುಗಳ ದರ್ಶನವನ್ನು ದೂರ ಮಾಡುತ್ತಿದೆ. ಈಗೀಗ ಶಿಕ್ಷಣ ಹೆಚ್ಚುತ್ತಿದೆ, ಸಂಸ್ಕಾರ ಕಡಿಮೆಯಾಗುತ್ತಿದೆ. ಪರೋಪಕಾರಿ ಗಳಲ್ಲಿ ಸುರರಿದ್ದರೆ, ಸ್ವಾರ್ಥಿಗಳಲ್ಲಿ ಅಸುರರು ಮನೆ ಮಾಡಿರುತ್ತಾರೆ. ಧರ್ಮ ಅಸುರತ್ವವನ್ನು ಓಡಿಸು ತ್ತದೆ. ಪಾಪದ ಅನುಮೋದನೆ ಅದನ್ನು ಹೆಚ್ಚಿಸುವುದಾಗಿದೆ. ಅದರ ನಿಂದನೆಯಿಂದ ಕಡಿಮೆಯಾಗಲಿದೆ ಎಂದು ಮುನಿ ಆಚಾರ್ಯ ಶ್ರೀ ಮಹೇಂದ್ರಸಾಗರ ಸುರೀಶ್ವರಜೀ ಅವರು ತಿಳಿಸಿದರು.
ಹದಿನಾರು ಸಾರೋಟಗಳು..
ಎಲ್ಲಾ ಹಂತದ ಉಪವಾಸ ಮಾಡಿದ 46 ಮಹಿಳೆಯರು (ಯುವತಿಯರೇ ಹೆಚ್ಚು), 8 ಪುರುಷರನ್ನು 16 ಸಾರೋಟುಗಳಲ್ಲಿ ಕುಳ್ಳಿರಿಸಿದ ಮೆರವಣಿಗೆಯು ವರ್ತಕರ ಸಂಘದಿಂದ ಹೊರಟು, ಸಂಗಮ ಸರ್ಕಲ್, ದೊಡ್ಡಪೇಟೆ, ಅಶೋಕ ಸರ್ಕಲ್, ರೈಲ್ವೆ ನಿಲ್ದಾಣದ ಬಳಿ ಹಾಯ್ದು ಜೈನ್ ಮಂದಿರ ತಲುಪಿತು. ಜೈನ್ ಸಮಾಜದ ಎಲ್ಲರೂ ತಮ್ಮ ವ್ಯಾಪಾರ, ವಹಿವಾಟುಗಳನ್ನು ಬಂದ್ ಮಾಡಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದಿದ್ದ ಉಪವಾಸ ಮಾಡಿದವರ ಬಂಧುಗಳು ಪಾಲ್ಗೊಂಡಿದ್ದರು. ಯುವಕ, ಯುವತಿಯರ ಗುಂಪುಗಳು ವಾಲಗದ ನಾದಕ್ಕೆ ಕುಣಿದು ಕುಪ್ಪಳಿಸುತ್ತಿದ್ದರು.
ಜೈನ ಸಮಾಜದವರು ಹೆಚ್ಚಿರುವ ನಾಡಿನ ದೊಡ್ಡಪಟ್ಟಣ, ನಗರಗಳಲ್ಲಿ ಆಗದ ಮೂವತ್ತು ಉಪವಾಸಗಳ ಈ ಮಹಾಮೃತ್ಯುಂಜಯ ಜಪ ಮಾಡಿರುವ ರಾಣೇಬೆನ್ನೂರು ಜೈನ ಸಮಾಜದ ಮಹಿಳೆಯರು, ಪುರು ಷರು ಜಗತ್ತಿಗೇ ಒಳಿತನ್ನು ಬಯಸಿದ್ದಾರೆ. ಎಂಟು, ಹತ್ತು, ಹದಿನೈದು, ಇಪ್ಪತ್ತು ಉಪವಾಸ ಮಾಡಿದವರೂ ಸಹ ಅವರ ಪಾಲುದಾರರಾಗಿದ್ದಾರೆ ಎಂದು ಆಶೀರ್ವದಿಸಿದರು.
ಜೈನ್ ಶ್ವೇತಾಂಬರ ಸಂಘದ ಅಧ್ಯಕ್ಷ ಪ್ರಕಾಶ ಜೈನ್, ಪದಾಧಿಕಾರಿಗಳಾದ ಪ್ರೀತಂ ಜೈನ್, ಹುಕ್ಮಿಚಂದ್ ಜೈನ್, ಅಭಿಷೇಕ ಭಂಡಾರಿ, ಮಹೇಂದ್ರಕುಮಾರ ಜೈನ್, ರಮೇಶ ಬಂಡಾರಿ, ಸುರೇಶ ಜೈನ್, ತೇಜರಾಜ್ ಜೈನ್, ಚಂದುಲಾಲ್ ಗಾಂಧಿ ಮತ್ತಿತರರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.