ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ತಂದವರು ಕಾಂಗ್ರೆಸ್‌ನವರು

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ತಂದವರು ಕಾಂಗ್ರೆಸ್‌ನವರು

ದಾವಣಗೆರೆ, ಆ. 29-  ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೆ ತಂದವರು ಕಾಂಗ್ರೆಸ್ ಪಕ್ಷದವರೇ ಹೊರತು, ಬಿಜೆಪಿಯವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾವೇ ಸ್ಮಾರ್ಟ್ ಸಿಟಿ ಯೋಜನೆ ತಂದವರು ಎಂದು ಹೇಳುವುದು ಎಷ್ಟು ಸರಿ. ಆಗ ದಾವಣಗೆರೆ 9ನೇ ಸ್ಥಾನದಲ್ಲಿತ್ತು. ಈಗ ಎಲ್ಲಿದೆ ಎಂದು ಅವಲೋಕಿಸಬೇಕಾಗಿದೆ ಎಂದು ಕಿಡಿಕಾರಿದರು.

 `ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿದಂತೆ’ ಸಂಸದ ಸಿದ್ದೇಶ್ವರರ ಹೇಳಿಕೆಯಾಗಿದೆ. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನನಗೆ ಮೊದಲಿನಿಂದಲೂ ಪರಿಚಯ. ಚೌಕಿಪೇಟೆಯಲ್ಲಿ ಅಂಗಡಿ ಇಟ್ಟಿದ್ದರು. ಅಂದಿನಿಂದಲೂ ಅವರ ಅಂಗಡಿಗೆ ಹೋಗುತ್ತಿದ್ದೆವು. ನಮ್ಮ ಸಂಬಂಧಿಕರೂ ಕೂಡ. ಅವರನ್ನು ಅಂದಿನಿಂದಲೂ ಬಲ್ಲೆ. ಸಿದ್ದೇಶ್ವರರು ಸಹ ಸಂಬಂಧಿಕರು. ಆದರೆ ರವೀಂದ್ರನಾಥ್ ಅವರಿಗೂ – ಇವರಿಗೂ ಬಹಳ ವ್ಯತ್ಯಾಸವಿದೆ. ರವೀಂದ್ರನಾಥ್ ಮಾತಿನ ತೂಕವೇ ಬೇರೆ. ಅವರ ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಗೌರವ ಕೂಡ ಇದೆ ಎಂದರು.

ಸಂಸದರು ಸ್ಮಾರ್ಟ್ ಸಿಟಿ ಯೋಜನೆಯಡಿ ಏನು ಮಾಡಿದ್ದಾರೆಂದು ಎಲ್ಲರಿಗೂ ಗೊತ್ತು. ಎಲ್ಲಾ ಹಣವನ್ನು ಅವರ ಕಾಲೇಜು ರಸ್ತೆಗೆ ಹಾಕಿರಬೇಕು. ಕೊರೊನಾ ಸಂದರ್ಭದಲ್ಲಿ ಏನೇನು ಮಾಡಿದ್ದಾರೆಂದು ಗೊತ್ತಿಲ್ಲ. ಎಲ್ಲಾ ಹಣ ದುರ್ಬಳಕೆ ಮಾಡಿಕೊಂಡು ಈಗ ರವೀಂದ್ರನಾಥ್, ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ ಅವರ ಮೇಲೆ ಹಾಕುತ್ತಿದ್ದಾರೆ. ನಾನೇನೂ ಮಾಡಿಲ್ಲ ಎಂದು ಆಣೆ-ಪ್ರಮಾಣ ಮಾಡಲಿ ಎಂದು ತಾಕೀತು ಮಾಡಿದರು.

ರೇಣುಕಾಚಾರ್ಯ ಮೊದಲ ಬಾರಿಗೆ ನಮ್ಮ ಮನೆಗೆ ಬಂದಿದ್ದರಿಂದ ಅವರನ್ನು  ಗೌರವಯುತವಾಗಿ ಮಾತನಾಡಿಸಿ ಕಳಿಸಿದ್ದೇವೆ ಅಷ್ಟೇ. ಪಕ್ಷದ ಆಂತರಿಕ ವಿಚಾರ ನನಗೆ ಗೊತ್ತಿಲ್ಲ.  ಯಾವ ಮಾಜಿ ಶಾಸಕರೂ ಸಹ ಸಂಪರ್ಕದಲ್ಲಿ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಬಡವರ ಕಣ್ಣೀರು ಒರೆಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ನಾಳೆ ಬುಧವಾರ ಮೈಸೂರಿನಲ್ಲಿ `ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ  ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ನಮ್ಮ ಸರ್ಕಾರದಲ್ಲಿನ ಬೆಲೆಗಳಿಗೂ ಈಗಿರುವ ಬೆಲೆಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.

error: Content is protected !!