ಧೂಳೆಹೊಳೆ ಸರ್ಕಾರಿ ಶಾಲೆಗೆ ಅಡುಗೆ ಸಾಮಗ್ರಿಗಳ ಕೊಡುಗೆ

ಧೂಳೆಹೊಳೆ ಸರ್ಕಾರಿ ಶಾಲೆಗೆ ಅಡುಗೆ ಸಾಮಗ್ರಿಗಳ ಕೊಡುಗೆ

ಮಲೇಬೆನ್ನೂರು, ಆ.28- ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ವತಿಯಿಂದ ಕ್ಷೀರ ಭಾಗ್ಯ ಹಾಗೂ ಮಧ್ಯಾಹ್ನದ ಉಪಹಾರ ಯೋಜನೆಗೆ ಅವಶ್ಯಕವಾಗಿ ಬೇಕಾಗಿರುವ ಪಾತ್ರೆಗಳು, ಇಡ್ಲಿ ಪಾತ್ರೆ, ಬೇಳೆ ಬೇಯಿಸುವ ಕುಕ್ಕರ್ ಸೇರಿದಂತೆ ಇತ್ಯಾದಿ ಸಾಮಗ್ರಿಗಳನ್ನು ಶನಿವಾರ ಕೊಡುಗೆಯಾಗಿ ನೀಡಿದರು. 

ಈ ಸಂದರ್ಭದಲ್ಲಿ ಪ್ರತಿಬಿಂಬ ಟ್ರಸ್ಟ್ ಮುಖ್ಯಸ್ಥ ಮುರಳಿ ರಾವ್         ಮಾತನಾಡಿ, ಶಾಲೆಯಲ್ಲಿ ಮಕ್ಕಳು ಶಿಕ್ಷಣದಿಂದ ಜ್ಞಾನವಂತರಾಗುವುದರ ಜೊತೆಗೆ ದೈಹಿಕವಾಗಿ ಸದೃಢರಾಗಿ ಇರಬೇಕಾಗಿರುತ್ತದೆ. ಅದಕ್ಕೆ ಶಾಲೆಯಲ್ಲಿ ನೀಡುವ ಕ್ಷೀರ ಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ಅತ್ಯಂತ ಅವಶ್ಯವಾಗಿರುತ್ತದೆ.  ಈಗಾಗಲೇ ಹರಿಹರ ತಾಲ್ಲೂಕಿನ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು ಜಿಗಳಿ, ಧೂಳೆಹೊಳೆ, ನಂದಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಳಸನೂರು ಪ್ರೌಢಶಾಲೆಗಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಬೇಕಾಗಿರುವ ಶೈಕ್ಷಣಿಕ ಭೌತಿಕ ಅಗತ್ಯತೆಗಳನ್ನು ಹಂತ – ಹಂತವಾಗಿ ಪೂರೈಸಲಿದ್ದೇವೆ ಎಂದು ಹೇಳಿದರು. 

ಪ್ರತಿಬಿಂಬ ಟ್ರಸ್ಟ್ ನಾಗೇಶ್, ರಾಘವೇಂದ್ರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಜಲಿಂಗಪ್ಪ, ಮಾಜಿ ಅಧ್ಯಕ್ಷ ಕೆ.ಜಿ.ಪ್ರಕಾಶ್, ಗ್ರಾ.ಪಂ.ಸದಸ್ಯ ಉಚ್ಚಂಗೆಪ್ಪ, ಗ್ರಾಮದ ಹಿರಿಯರಾದ ಇಟ್ಟಿಗೆ ಬಸವರಾಜಪ್ಪ, ಕರೇಗೌಡ್ರು ನಾಗಣ್ಣ, ಕುಬೇಂದ್ರ ಬಣಕಾರ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶರಣ್ ಕುಮಾರ ಹೆಗಡೆ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದರು.

error: Content is protected !!