ತಾನು ಕಟ್ಟಿಕೊಂಡಿದ್ದ ಸ್ವಾವಲಂಬಿ ಬದುಕಿನಿಂದ ನೂರಾರು ಮಹಿಳೆಯರಿಗೆ ಮಾರ್ಗದರ್ಶನ ನೀಡಿದ್ದ ಟೈಲರ್ ಉಮ್ಮಕ್ಕ

ತಾನು ಕಟ್ಟಿಕೊಂಡಿದ್ದ ಸ್ವಾವಲಂಬಿ ಬದುಕಿನಿಂದ ನೂರಾರು ಮಹಿಳೆಯರಿಗೆ ಮಾರ್ಗದರ್ಶನ ನೀಡಿದ್ದ ಟೈಲರ್ ಉಮ್ಮಕ್ಕ

ದಾವಣಗೆರೆ, ಆ. 28- ಹೊಲಿಗೆ ಟೀಚರ್ ಉಮ್ಮಕ್ಕ ಎಂದೇ ಜನಪ್ರಿಯರಾಗಿದ್ದ ನಗರದ ಹೆಸರಾಂತ ಮಹಿಳಾ ಟೈಲರ್ ಮತ್ತು ಬಟ್ಟೆ ಹೊಲಿಯುವ ಶಿಕ್ಷಕಿ ಶ್ರೀಮತಿ ಡಿ.ಸಿ. ಉಮಾದೇವಿ ಮೊನ್ನೆ ನಿಧನರಾದರು. 

ಸ್ಥಳೀಯ ಕೊಂಡಜ್ಜಿ ರಸ್ತೆ ವಿಜಯನಗರ ಬಡಾವಣೆ, 2ನೇ ಮುಖ್ಯರಸ್ತೆ, 6ನೇ ತಿರುವಿನಲ್ಲಿನ ಉಮಾ ನಿಲಯದಲ್ಲಿ ವಾಸವಾಗಿದ್ದ ಉಮ್ಮಕ್ಕ ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂಕ್ಷಿಪ್ತ ಪರಿಚಯ  : ಮೂಲತಃ ಮಲ್ಲಾಬಾದಿ ಮನೆತನದವರಾದ ಉಮಾದೇವಿ ಓದಿದ್ದು ಕೇವಲ 4ನೇ ತರಗತಿವರೆಗೆ ಮಾತ್ರ. ದಿ. ಮಲ್ಲಾಬಾದಿ ಕಲಿವೀರಪ್ಪ ಮತ್ತು ದಿ. ಶ್ರೀಮತಿ ಪಾರ್ವತಮ್ಮ ದಂಪತಿ ಪುತ್ರಿಯಾಗಿ 1943, ಸೆಪ್ಟೆಂಬರ್ 12ರಂದು ಜನಿಸಿದರು.

ಕಡುಬಡತನದ ಹಿನ್ನೆಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಟೈಲರ್ ತರಬೇತಿ ಪಡೆದರು. 1961ರಲ್ಲಿ ಡ್ರೈವರ್ ಚಂದ್ರಶೇಖರಪ್ಪ  ಅವರೊಂದಿಗೆ ವಿವಾಹವಾದ ಅವರು, ಪತಿಯ ಕೆಲಸದ ಮೇಲೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಎರಡು, ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1965 ರಲ್ಲಿ ದಾವಣಗೆರೆಗೆ ಆಗಮಿಸಿದ ಕೆಲ ವರ್ಷಗಳಲ್ಲಿ ಪತಿ ಚಂದ್ರಶೇಖರಪ್ಪ ಅಕಾಲಿಕವಾಗಿ ನಿಧನರಾದರು. ಆಗ ತಮ್ಮ ಜೀವನಕ್ಕೆ ಆಸರೆಯಾದದ್ದು ಟೈಲರ್ ವೃತ್ತಿ. 

1965ರಿಂದ ಬಟ್ಟೆ ಹೊಲಿಯವ ವೃತ್ತಿ ಆರಂಭಿಸಿದ ಉಮ್ಮಕ್ಕ, ಈ ವೃತ್ತಿಯಿಂದಲೇ ತಮ್ಮ ಇಡೀ ಕುಟುಂಬವನ್ನು ಸಂತೃಪ್ತಿಯನ್ನಾಗಿಸಿ ಕೊಳ್ಳುವಲ್ಲಿ ಯಶಸ್ವಿಯಾದರು.

ತಮ್ಮಂತ ಬಡ ಮಹಿಳೆಯರಿಗೆ ಬಟ್ಟೆ ಹೊಲಿಯುವ ಕೆಲಸವನ್ನು ಕಲಿಸಿ, ಅವರನ್ನೂ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಕಂಡ ಕನಸು ನನಸಾಗಿಸಿಕೊಂಡರು.

1968 ರಿಂದ ತಮ್ಮ ಮನೆಯಲ್ಲಿಯೇ ಹೊಲಿಗೆ ತರಬೇತಿ ಪ್ರಾರಂಭಿಸಿದರು. ತಮ್ಮ ಕೊನೆ ಉಸಿರಿರುವವರೆಗಿನ ಸುಮಾರು 55 ವರ್ಷಗಳ ಟೈಲರ್ ವೃತ್ತಿ ಜೀವನದಲ್ಲಿ ಕನಿಷ್ಟ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದು ಮಾತ್ರವಲ್ಲದೇ, ನೂರಾರು ಮಹಿಳೆಯರನ್ನು ಸ್ವಾವಲಂಬಿಗಳ ನ್ನಾಗಿಸಿ ಸಂತೃಪ್ತ ಜೀವನ ನಡೆಸಲು ಆಸರೆಯಾಗಿದ್ದರು.

ಪೊಲೀಸ್ ವೆಲ್‌ಫೇರ್ ನಲ್ಲಿ ಬಟ್ಟೆ ಹೊಲಿಯುವುದು,
ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಗಳಿಗೆ ಬಟ್ಟೆ ಹೊಲಿಯುವ ಕೆಲಸ ಮಾಡಿದ್ದಾರೆ. 

ಕೇವಲ ಬಟ್ಟೆ ಹೊಲಿಯುವುದು ಮಾತ್ರ ವಲ್ಲದೇ, ಬಟ್ಟೆಗಳ ಮೇಲೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.

ವಿವಿಧ ಬಗೆಯ ಅಡುಗೆ, ಪುಸ್ತಕ-ದಿನಪತ್ರಿಕೆ ಓದುವುದು, ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

ಟೈಲರ್ ವೃತ್ತಿಯ ಜೊತೆ-ಜೊತೆಗೆ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಭಾಗವಹಿ ಸುವುದರ ಮೂಲಕ ಅಪಾರ ದೈವಭಕ್ತರೂ ಆಗಿದ್ದರು. ಇದರಿಂದ ಅನೇಕ ದೇವಸ್ಥಾನ ಮತ್ತು ಮಠಗಳಿಗೆ ದಾನ-ಧರ್ಮ ಮಾಡಿದ್ದಾರೆ. ವಿವಿಧ ವಿಚಾರಗಳ ಕುರಿತಂತೆ ಅಲ್ಲಲ್ಲಿ ನಡೆಯುತ್ತಿದ್ದ ಶಿಬಿರ, ಕಾರ್ಯಾಗಾರಗಳಲ್ಲೂ ಪಾಲ್ಗೊಂಡು ಸಾಕಷ್ಟು ವಿಚಾರಗಳನ್ನು ಅರಿತುಕೊಂಡಿದ್ದರು. 

ಉಮ್ಮಕ್ಕನವರ ಟೈಲರ್ ವೃತ್ತಿ ಮತ್ತು ಯಶಸ್ವೀ ಸ್ವಾವಲಂಬಿ ಬದುಕನ್ನು ಪರಿಗಣಿಸಿ, ತುಮಕೂರಿನ ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠ ಸೇರಿದಂತೆ ಅನೇಕ ಮಠಗಳು, ಗುರು ರಕ್ಷೆ ನೀಡಿ ಆಶೀರ್ವದಿಸಿವೆ.

ದಾವಣಗೆರೆ ಲಯನ್ಸ್ ಕ್ಲಬ್ ತನ್ನ ಲಯನ್ಸ್ ಶತಮಾನೋತ್ಸವ ಸಮಾರಂಭದಲ್ಲಿ ದೇವನಗರಿ ಸಿರಿ  ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಅನೇಕ ಸಾಮಾಜಿಕ ಸಂಸ್ಥೆಗಳು ಉಮ್ಮಕ್ಕನವರಿಗೆ ಪುರಸ್ಕಾರಗಳನ್ನು ನೀಡಿ ಸತ್ಕರಿಸಿವೆ.

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬ ಗಾದೆಯಂತೆ ಉಮ್ಮಕ್ಕನವರು ತಮ್ಮ ಜೀವನದ ಹಾದಿಯಲ್ಲಿ ಅವಿರತ ಶ್ರಮ ದಿಂದ ಜೀವಿಸಿ, ಎಲೆಮರೆಯ ಕಾಯಿಯಂತಿ ದ್ದರು. ಜೀವನದಲ್ಲಿ ಅನೇಕ ಏರು-ಪೇರುಗಳ ನಡುವೆಯೂ ತಮ್ಮ ನಿಸ್ವಾರ್ಥ ಕಾಯಕ ಪ್ರಾಮಾ ಣಿಕತೆಯಿಂದಲೇ ಹೊಲಿಗೆ ವೃತ್ತಿಯಲ್ಲಿ ಜೀವನ ನಡೆಸುವುದರ ಮೂಲಕ ಮಕ್ಕಳ ಪೋಷಣೆ, ಅವರ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದು. ಬದುಕಿನ ಯಾವುದೇ ಕಷ್ಟಕ್ಕೂ ಎದೆಗುಂದದೆ ಉತ್ಸಾಹದಿಂದಲೇ ತುಂಬು ಕುಟುಂಬದ ಜೀವನ ನಿರ್ವಹಣೆಯೊಂದಿಗೆ ಅನೇಕರಿಗೆ ಸ್ಪೂರ್ತಿದಾಯಕರಾಗಿದ್ದರು.

error: Content is protected !!