ಜಾತಿ ಬಗ್ಗೆ ಕೀಳರಿಮೆ ಬೇಡ

ಜಾತಿ ಬಗ್ಗೆ ಕೀಳರಿಮೆ ಬೇಡ

ಸವಿತಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ವಿಶ್ವನಾಥ್ ಸ್ವದೇಶಿ

ದಾವಣಗೆರೆ, ಆ. 26- ಕಾಡಿನ ರಾಜ ಎಂದು ಸಿಂಹಕ್ಕೆ ಸುಮ್ಮನೆ ಕಿರೀಟ ಇಟ್ಟು ಗೌರವಿಸುವುದಿಲ್ಲ. ಕಾಡನ್ನು ಆಳಬಲ್ಲ ಶಕ್ತಿ ಸಿಂಹಕ್ಕೆ ಇರುವುದರಿಂದಲೇ ಅದು ಗೌರವಕ್ಕೆ ಪಾತ್ರವಾಗುತ್ತದೆ. ಹಾಗೆಯೇ ಸವಿತಾ ಸಮಾಜ ದವರು ಕೀಳರಿಮೆ ತೊರೆದು ಸಂಘಟಿತರಾಗಿ ಘರ್ಜಿಸಿದಾಗ ಗೌರವ ತಾನಾಗಿಯೇ ದೊರೆಯುತ್ತದೆ ಎಂದು  ರಾಜ್ಯ ಸವಿತಾ ಸಮಾಜದ ಮುಖಂಡ ವಿಶ್ವನಾಥ್ ಸ್ವದೇಶಿ ಕರೆ ನೀಡಿದರು.

ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸವಿತಾ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ ಮಹಾಪದ್ಮನಂದನನ ವಂಶಸ್ಥರು, ಅವಧೂತರ ಪರಂಪರೆಯವರೂ ಆದ ನಮ್ಮದು ಶ್ರೇಷ್ಠ ಸಮಾಜ. ಈ ಸಮಾಜದ ಬಗ್ಗೆ ಕೀಳರಿಮೆ ಬೇಡ. ನಮ್ಮ ಜಾತಿಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳುವಂತಾಗಬೇಕು ಎಂದು ಕಿವಿ ಮಾತು ಹೇಳಿದು.

ನಮ್ಮ ಸಮಾಜವನ್ನು ಗುರುತಿಸಿಕೊಳ್ಳದ ಪರಿಣಾಮ ಇಂದು ನಾವು ಅಲ್ಪಸಂಖ್ಯಾತರಾಗಿದ್ದೇವೆ.  ನಮ್ಮ ವ್ಯಕ್ತಿತ್ವದಿಂದ ಗೌರವ ಸಿಗುತ್ತದೆಯೇ ಹೊರತು ಜಾತಿಯಿಂದಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ವ್ಯಕ್ತಿತ್ವದಿಂದ ಬದುಕು ರೂಪಿಸಿಕೊಳ್ಳುವಂತೆ ಹೇಳಿದರು.

ಮೂಲತಃ ನಾವೆಲ್ಲಾ ರೈತ ಜೀವಿಗಳು. ಕುಂಬಾರ, ಬಡಗಿ, ಕ್ಷೌರಿಕ ಹೀಗೆ ಒಬ್ಬೊಬ್ಬರೂ ಒಂದೊಂದು ಉಪ ವೃತ್ತಿಗಳನ್ನು ಆರಂಭಿಸಿದರು. ಈ ರೀತಿ ಉಪ ವೃತ್ತಿ ಮಾಡುವರಿಗೆ ಬೆಳೆದ ಬೆಳೆಯಲ್ಲಿಯೇ ಒಂದಿಷ್ಟು ಭಾಗ ನೀಡಲಾಗುತ್ತಿತ್ತು. ಯಾವಾಗ ವೃತ್ತಿಗೆ ಹಣ ನೀಡಲು ಆರಂಭವಾಯಿತೋ ಆಗ ವೃತ್ತಿಗಳನ್ನು ಜಾತಿಗಳಿಂದ ಗುರುತಿಸಲು ಆರಂಭಿಸಲಾಯಿತು. ಈ ಜಾತಿ ಪರಂಪರೆಯನ್ನು ಹುಟ್ಟುಹಾಕಿದ್ದೇ ವಿದೇಶಿಗರು ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಡಾಕ್ಟರ್ ಜಾತಿ, ಇಂಜಿ ನಿಯರ್ ಜಾತಿ, ವಕೀಲರ ವೃತ್ತಿಯೂ ಜಾತಿಯಾ ದರೆ ಆಶ್ಚರ್ಯವಿಲ್ಲ ಎಂದ ಅವರು, ಜಾತಿಗೆ  ಪ್ರಾಮುಖ್ಯತೆ ನೀಡುವುದು ಬೇಡ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಪಿ.ಬಿ. ವೆಂಕಟಾ ಚಲಪತಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಳೆದ ಹತ್ತು ವರ್ಷಗಳ ಹಿಂದೆ ಸಮಾಜಕ್ಕೆ ಏನಾ ದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಾಲ್ಕು ಜನರಿಂದ ಆರಂಭವಾದ ಈ ಸಂಘ ಎಲ್ಲರ ಸಹಕಾರದಿಂದ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ. ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಪ್ರದೇಶದ ಅವದೇಶ ಕುಮಾರ್ ನಂದಾ, ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಭೀಮಸೇನ, ರಾಜ್ಯ ಸವಿತಾ ಸಮಾಜದ ಮುಖಂಡ ಕೃಷ್ಣಪ್ಪ ಎಂ.ದಾಸರಹಳ್ಳಿ, ಶಿಲ್ಪಿ ವಿಶ್ವಾಸ್ ಎಂ.ವಿ.ಎ., ಸಂಘದ ಜಿಲ್ಲಾಧ್ಯಕ್ಷ ಬಾಲ ರಾಜ್ ಉಪ್ಪಾಲ, ತಾಲ್ಲೂಕು ಅಧ್ಯಕ್ಷರುಗಳಾದ ರಾಜು ಗೌಡರ್, ನಾಗರಾಜ್ ಸಾಸ್ವೇಹಳ್ಳಿ, ಬಾಲ ರಾಜ್, ಬಿ.ಲಿಂಗಪ್ಪ ಇತರರು ಉಪಸ್ಥಿತರಿದ್ದರು. ಎನ್. ಮಂಜುನಾಥ್ ಪ್ರಾರ್ಥಿಸಿದರು. ರಾಜಮೋಹನ್ ಎನ್.ಆರ್. ಸ್ವಾಗತಿಸಿದರು.

error: Content is protected !!