ಸರ್ಕಾರಕ್ಕೆ ಶಾಸಕ ಬಿ. ದೇವೇಂದ್ರಪ್ಪ ಒತ್ತಾಯ
ಜಗಳೂರು, ಆ.27- ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ಶೇಂಗಾ, ರಾಗಿ, ಈರುಳ್ಳಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಒಣಗಿಹೋಗಿವೆ. ರೈತರು ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ನಮ್ಮ ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಒತ್ತಾಯಿಸಿದರು.
ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ತಾಲ್ಲೂಕಿನ ಸಿದ್ದಿಹಳ್ಳಿ, ಭರಮಸಮುದ್ರ, ಮುಸ್ಟೂರು, ಹಿರೇಮಲ್ಲನಹೊಳೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನಿಗೆ ಭೇಟಿ ನೀಡಿ ಬಾಡುತ್ತಿರುವ ವಿವಿಧ ಬೆಳೆಗಳನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.
ಪ್ರೊ.ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲ್ಲೂಕು ಆಗಿದ್ದು, ಪ್ರಸಕ್ತ ಸಾಲಿನಲ್ಲಿ ವಾಡಿ ಕೆಗಿಂತ ಕಡಿಮೆ ಮಳೆಯಾಗಿದೆ. ಪರಿಣಾಮ ಶೇ.30 ರಷ್ಟು ಮಾತ್ರ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ ಬೆಳೆಗಳ ಬಿತ್ತನೆ ನಡೆದಿದೆ. ಬಿತ್ತನೆ ಮಾಡಿದ ಬೆಳೆಗಳು ಸಕಾಲದಲ್ಲಿ ಮಳೆಯ ಕೊರತೆಯಿಂದ ಶೇ.75 ರಷ್ಟು ಬೆಳೆದು ನಿಂತ ಬೆಳೆಗಳು ಬಾಡಿಹೋಗುತ್ತಿವೆ. ಆದರೂ ಕೇಂದ್ರದ ಎನ್ಡಿಆರ್ಎಫ್ ಅಧಿಕಾರಿಗಳ ತಂಡದ ವರದಿಯಂತೆ ಸರ್ಕಾರ ” “ಮಧ್ಯಮ ಬರಪೀಡಿತ ತಾಲ್ಲೂಕು”ಎಂದು ಘೋಷಿಸಿರು ವುದು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣ ವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಪಕ್ಕದ ಹೊನ್ನಾಳಿ ತಾಲ್ಲೂಕಿನಲ್ಲಿ ಶೇ.30ಕ್ಕೂ ಅಧಿಕ ನೀರಾವರಿ ಪ್ರದೇಶ ಆವರಿಸಿದೆ. ಜಗಳೂರು ಯಾವುದೇ ನೀರಾವರಿ ಮೂಲಗಳಿಲ್ಲದೆ ಮಳೆಯಾಶ್ರಿತ ಪ್ರದೇಶವಾಗಿದ್ದು. ಆದರೂ ಸಂಪೂರ್ಣ ಬರಪೀಡಿತ ತಾಲ್ಲೂಕು ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
10 ದಿನಗಳೊಳಗಾಗಿ ತಾಲ್ಲೂಕಿನ ಪ್ರತಿ ಹೋಬಳಿವಾರು ಬೆಳೆ ಸಮೀಕ್ಷೆಯ ನೈಜ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಕೂಡಲೇ ಸಮರ್ಪಕ ಬೆಳೆ ಸಮೀಕ್ಷೆಯ ವರದಿಯೊಂದಿಗೆ ಶಿಫಾರಸ್ಸನ್ನು ಕೃಷಿ ಸಚಿವರಿಗೆ ಸಲ್ಲಿಸಿ “ಸಂಪೂರ್ಣ ಬರಪೀಡಿತ ತಾಲ್ಲೂಕು” ಎಂದು ಘೋಷಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರವಾಹ, ಅನಾವೃಷ್ಟಿ, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟದ ಮಾಹಿತಿ ಪಡೆದು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟದ ಉಪಸಭೆ ನಡೆಸಲಾಗಿದೆ. ಆದ್ದರಿಂದ ಬೆಳೆ ನಷ್ಟ ವೀಕ್ಷಣೆ ಮಾಡಲಾಗಿದೆ. ಕ್ಷೇತ್ರದ ರೈತರ ಬೆಳೆಗಳು ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಗೆ ಸಿಲುಕದಂತೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿ, ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಆಗಸ್ಟ್ ತಿಂಗಳ ಅಂತ್ಯಕ್ಕೆ 57 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 17ಮೀ.ಮೀ.ಮಳೆಯಾಗಿದ್ದು.ಮೆಕ್ಕೆಜೋಳ, ರಾಗಿ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಕೇವಲ 51 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಬಿತ್ತನೆ ಕಾರ್ಯಕ್ಕೆ ಹಿನ್ನಡೆಯ ಜೊತೆಗೆ ಬೆಳೆದ ಬೆಳೆಗಳೂ ಸಂಪೂರ್ಣ ಒಣಗಿವೆ. ಕೂಡಲೇ ರೈತರ ಬೆಳೆಗಳ ನೈಜ ಸ್ಥಿತಿಗತಿಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಪ್ಪ ,ರಾಜಸ್ವ ನಿರೀಕ್ಷಕ ಧನಂಜಯ, ಸಹಾಯಕ ಕೃಷಿ ಅಧಿಕಾರಿ ಜೀವಿತಾ, ತೋಟಗಾರಿಕೆ ಅಧಿಕಾರಿಗಳಾದ ಪ್ರಸನ್ನ, ಅನಂತ್ ಕುಮಾರ್ ಮುಖಂಡರಾದ ಪ್ರಕಾಶರೆಡ್ಡಿ, ಸುದೀರ್ ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.