ಸ್ಮಾರ್ಟ್ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್
ದಾವಣಗೆರೆ, ಆ.27- ಬೌದ್ಧಿಕ ಆಸ್ತಿ ಹಕ್ಕಿನಿಂದ ಆರ್ಥಿಕ ಪ್ರಗತಿ, ಹೊಸ ಕೈಗಾರಿಕೆ, ತಯಾರಕ ಸಂಸ್ಥೆಗಳ ಸ್ಥಾಪನೆ ಉದ್ಯೋಗ ಸೃಷ್ಠಿಗೆ ಕಾರಣವಾಗುವುದರ ಮೂಲಕ ಜನರ ಜೀವನದ ಗುಣಮಟ್ಟವನ್ನು ಉತ್ತಮ ಪಡಿಸಲು ಸಹಕಾರವಾಗುತ್ತದೆ ಎಂದು ದಾವಣಗೆರೆ ಸ್ಮಾರ್ಟ್ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ್ ಕುಮಾರ್ ನುಡಿದರು.
ಸ್ಥಳೀಯ ವಿಶ್ವವಿದ್ಯಾಲಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಬೌದ್ಧಿಕ ಆಸ್ತಿ ಹಕ್ಕುಗಳ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಬೌದ್ಧಿಕ ಆಸ್ತಿ ಹಕ್ಕುಗಳು’ ವಿಷಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಬೌದ್ದಿಕ ಸಾಮರ್ಥ್ಯದಿಂದ ಸೃಷ್ಟಿಸಲ್ಪಟ್ಟ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಕ್ರಿಯೆಗಳನ್ನು ಬೌದ್ದಿಕ ಸ್ವತ್ತುಗಳು ಅಥವಾ ಆಸ್ತಿಯ ಹಕ್ಕುಗಳಾಗಿ ರಕ್ಷಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸ್ಮಾರ್ಟ್ಸಿಟಿಯ ಬಗ್ಗೆ ಮಾತನಾಡುತ್ತಾ ದಾವಣಗೆರೆ ನಗರವು ದೇಶದಲ್ಲಿ 23ನೇ ಸ್ಥಾನದಲ್ಲಿದ್ದು, ಹಾಗೂ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿದ್ದು ಅತ್ಯುತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಶೇಖರಪ್ಪ ಬಿ.ಮಲ್ಲೂರ ಮಾತನಾಡಿ, ಬೌದ್ದಿಕ ಆಸ್ತಿಯ ಹಕ್ಕು ಇತರೆ ಆಸ್ತಿಗಳಂತೆ ಅದನ್ನು ಹೊಂದಿದ ಅಥವಾ ಸೃಷ್ಠಿಸಿದ ಲೇಖಕರಿಗೆ, ಸಂಶೋಧಕರಿಗೆ ಉತ್ಪಾದಕ ಸಂಸ್ಥೆಗಳಿಗೆ ಕಾನೂನಾತ್ಮಕವಾಗಿ ನೀಡುವುದಲ್ಲದೇ ಆರ್ಥಿಕ ಅಥವಾ ಹಣಕಾಸಿನ ಅನುಕೂಲಗಳನ್ನು ಒದಗಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರೆ ಪ್ರಾಚಾರ್ಯ ಡಾ. ಕೆ. ಮಂಜುನಾಥ ಮಾತನಾಡಿ, ಪೇಟೆಂಟ್ ಎನ್ನುವುದು ಹೊಸ ಸಂಶೋಧನೆ ಅಥವಾ ಆವಿಷ್ಕಾರಕ್ಕಾಗಿ ನೀಡಲಾದ ವಿಶೇಷ ಹಕ್ಕು. ಇದು ಸೀಮಿತ ಅವಧಿಗೆ ಒಳಪಟ್ಟಿರುತ್ತದೆ ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿಯ ಯೋಜನಾ ಸಲಹೆಗಾರ ಹಾಗೂ ಮುಖ್ಯಸ್ಥ ಹೊಂಬಣ್ಣ, ಡೀನ್ ಉಮಾಪತಿ, ಡಾ.ಟಿ.ಡಿ.ವಿಷ್ಣುಮೂರ್ತಿ, ಡೀನ್ ಡಾ.ಮಂಜಾನಾಯ್ಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಚಂಪಾ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ, ಡಾ. ಎಸ್. ಮಂಜಪ್ಪ ಸ್ವಾಗತಿಸಿದರು. ಸಿ.ಎಮ್.ರವಿಕುಮಾರ್ ಮತ್ತು ಡಾ. ಮಹಮ್ಮದ್ ರಫೀ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಎಂ.ಹೆಚ್.ದಿವಾಕರ್ ನಿರೂಪಿಸಿದರು. ಡಾ.ಈರಪ್ಪ ಸೊಗಲದ್ ವಂದಿಸಿದರು.