ಪಟ್ಟಸಾಲಿ ನೇಕಾರ ಸಮಾಜದ ಸಭೆಯಲ್ಲಿ ಹಿರಿಯ ವೈದ್ಯ ಡಾ. ಶ್ರೀಶೈಲ ಬ್ಯಾಡಗಿ ಕರೆ
ದಾವಣಗೆರೆ, ಆ.27- ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜ ಸಂಘಟನೆಗೆ ಪಟ್ಟಸಾಲಿ ನೇಕಾರ ಸಮಾಜ ಸುಧಾರಣಾ ಸಂಘ ಮುಂದಾಗಬೇಕೆಂದು ಸುಕ್ಷೇಮ ಆಸ್ಪತ್ರೆಯ ಡಾ. ಶ್ರೀಶೈಲ ಬ್ಯಾಡಗಿ ಕರೆ ನೀಡಿದರು.
ನಗರದ ಎಂಸಿಸಿ `ಬಿ’ ಬ್ಲಾಕ್‌ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಹತ್ತಿರದ ಪಟ್ಟಸಾಲಿ ನೇಕಾರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಪಟ್ಟಸಾಲಿ ನೇಕಾರ ಸಮಾಜ ಸುಧಾರಣಾ ಸಂಘ, ಪಟ್ಟಸಾಲಿ ನೇಕಾರ ಯುವಕರ ಸಂಘ, ಪಟ್ಟಸಾಲಿ ನೇಕಾರ ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಐದು ದಶಕಗಳ ಹಿಂದೆ ಸಮಾಜದ ಮುಂದೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಅವುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಸಮಾಜ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಇನ್ನೂ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಲು ಯುವಕರು ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಪಟ್ಟಸಾಲಿ ನೇಕಾರ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಚಿನ್ನಿಕಟ್ಟಿ ಶ್ರೀನಿವಾಸ್ ಮಾತನಾಡಿ, ಸಮುದಾಯ ಭವನ, ಸಾಲೇಶ್ವರ ದೇವಸ್ಥಾನ ನಿರ್ಮಾಣ, ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪುರಸ್ಕರಿಸುವುದು, ಸಾಮೂಹಿಕ ವಿವಾಹ ಆಯೋಜನೆ ಸೇರಿದಂತೆ ಅನೇಕ ಕಾರ್ಯ ಯೋಜನೆಗಳಿವೆ ಎಂದರು.
ನಾಲ್ಕು ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಅನುದಾನದ ಜೊತೆಗೆ ಸಮಾಜದ ದೇಣಿಗೆಯ ಅಗತ್ಯವಿದೆ. ಸರ್ಕಾರದ ಅನುದಾನ ಪಡೆಯಲು ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪಟ್ಟಸಾಲಿ ನೇಕಾರ ಸುಧಾರಣಾ ಸಂಘದ ಗೌರವ ಅಧ್ಯಕ್ಷೆ ಶ್ರೀಮತಿ ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್. ಶಿವಪ್ಪ ಶೆಟ್ರು, ಜಿಲ್ಲಾ ಗೌರವ ಸಲಹೆಗಾರ ನಾಗೇಶಪ್ಪ ಎನ್ ಚಿನ್ನಿಕಟ್ಟೆ, ಪಟ್ಟಸಾಲಿ ನೇಕಾರ ಯುವಕರ ಸಂಘದ ಅಧ್ಯಕ್ಷ ಹನುಮಂತಪ್ಪ ಪಿ. ಗುತ್ತಲ್, ಮಹಿಳಾ ಘಟಕದ ಅಧ್ಯಕ್ಷೆ ಗದಿಗೆಮ್ಮ, ಯಲ್ಲಪ್ಪ ಕದರಮಂಡಲಗಿ, ಕಾರ್ಯದರ್ಶಿ ಕೃಷ್ಣಪ್ಪ, ಖಜಾಂಚಿ ಲಿಂಗರಾಜು, ಜೆ. ಹೂಲಿಹಳ್ಳಿ, ಉಪಾಧ್ಯಕ್ಷ ನಾಗರಾಜ್ ರಾಂಪುರ ಮತ್ತಿತರರಿದ್ದರು.
ಶ್ರೀಮತಿ ವಸಂತ ತೇಜೋಮಣಿ ಪ್ರಾರ್ಥಿಸಿದರು. ಈಶ್ವರಿ ಚಿನ್ನಿಕಟ್ಟೆ ಸ್ವಾಗತಿಸಿದರು. ಅಜಯ್ ನಿರೂಪಿಸಿದರು. ಶಿವರಾಜ್ ಎಸ್. ಮಾಗಳ್ ವಂದಿಸಿದರು.