`ದೌರ್ಜನ್ಯ ವಿರುದ್ಧ ಸೌಜನ್ಯ’ : ಇಂದಿನಿಂದ ಪಾದಯಾತ್ರೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ

ದಾವಣಗೆರೆ, ಆ. 25- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಅ. 9, 2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ಧಾರುಣವಾಗಿ ಕೊಲೆಯಾದ ಸೌಜನ್ಯ ಎಂಬ ಯುವತಿ ಕುಟುಂಬಕ್ಕೆ ಇದುವರೆಗೂ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಾಳೆ ದಿನಾಂಕ 26 ರಿಂದ ಸೆಪ್ಟಂಬರ್ 8 ರವರೆಗೆ ಬೆಳ್ತಂಗಡಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಭಟ್ರಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಬೆಳ್ತಂಗಡಿಯಿಂದ ಆರಂಭಗೊಂಡ ಪಾದಯಾತ್ರೆಯು ಧರ್ಮಸ್ಥಳ, ಉಜಿರೆ, ಚಾರ್ಮಡಿ, ಬಣಕಲ್, ಜನ್ನಾಪುರ, ಬೇಲೂರು, ಹೂವಿನಹಳ್ಳಿ ಕಾವಲ್, ಶಾಂತಿಗ್ರಾಮ, ಚನ್ನರಾಯಪಟ್ಟಣ, ಕದಬಳ್ಳಿ, ಯಡಿಯೂರು, ಕುಣಿಗಲ್, ಸೋಲೂರು, ಮಾಕಳಿ ಮಾರ್ಗವಾಗಿ ಬೆಂಗಳೂರು ಸೇರಲಿದೆ. 

14 ದಿನಗಳ ಈ ಪಾದಯಾತ್ರೆ ಸುಮಾರು 330 ಕಿ.ಮೀ. ಕ್ರಮಿಸಲಿದ್ದು, ಸೆ. 8 ರಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಿದೆ ಎಂದರು.

ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡ ರಚಿಸಬೇಕು. ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾ ಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದು, ಅದಕ್ಷ ಮತತು ಭ್ರಷ್ಟ ಪೊಲೀಸ್ ವ್ಯವಸ್ಥೆಯಿಂದ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಕೆಆರ್‌ಎಸ್ ಪಕ್ಷ ಸಂಗ್ರಹಿಸಿರುವ ಮಾಹಿತಿ ಆಧರಿಸಿ ಹೇಳುವುದಾದರೆ ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳಲ್ಲಿ ಕೇವಲ ಶೇ. 1.18 ರಷ್ಟು ಮಾತ್ರ ಶಿಕ್ಷೆಯಾಗಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಷನವಾಜ್ ಖಾನಂ, ಯುವ ಘಟಕದ ಜಿಲ್ಲಾಧ್ಯಕ್ಷ ಎನ್.ಎಸ್. ಅಭಿಷೇಕ್, ಜೆ.ಡಿ. ರಹಮತ್ ಉಲ್ಲಾ ಮತ್ತಿತರರಿದ್ದರು. 

error: Content is protected !!