`ನಾನು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲ’ : ಡಾ. ಪ್ರಭಾ

`ನಾನು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲ’ : ಡಾ. ಪ್ರಭಾ

ಜಗಳೂರು, ಆ.25- ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ವಿಧಾನಸಭಾ ಚುನಾವಣೆ ಗೆಲುವು ದಿಕ್ಸೂಚಿಯಾಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭವಿಷ್ಯ ನುಡಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಇಂದು ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಿ ಮಾತನಾಡಿದರು.

ದೇಶದಲ್ಲಿ ಕೋಮುವಾದಿ ಶಕ್ತಿ ಭ್ರಷ್ಟ ಬಿಜೆಪಿ ಸರ್ಕಾರದ ಆಡಳಿತ ಮುಕ್ತಗೊಳಿಸಬೇಕು‌. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೇ ಟಿಕೇಟ್ ನೀಡಿದರೂ
ಗೆಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಭಾರತ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ತಮ್ಮದೇ ಸ್ಥಾನಮಾನವಿದೆ. ವರಮಹಾಲಕ್ಷ್ಮಿ ಪೂಜೆ ವರದಾನವಾಗಿದೆ. ಭಕ್ತಿ ಶ್ರದ್ಧೆಯ ಮಹಿಳೆಯರನ್ನು ಗೌರವಿಸುವ ಹಬ್ಬವಾಗಿದೆ.

ಐಶ್ವರ್ಯ ಸಂಪತ್ತು ಗಳಿಸಿದ ಕುಟುಂಬದ ಸೊಸೆಯಾಗಿ ನಮ್ಮ‌ ಕರೆಗೆ ಓಗೊಟ್ಟು   ನಮ್ಮ ಮನೆಗೆ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿರುವುದು ಸಂತೋಷ ತಂದಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸರಳ ಸಜ್ಜನಿಕೆಯ ಎಸ್ಸೆಸ್ ಕುಟುಂಬದ ರೂವಾರಿಗಳು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ‌ ಮಹಿಳೆಗೆ ಸ್ಥಾನಮಾನ ದೊರಕಲಿ ಎಂದು ಆಶಯ ವ್ಯಕ್ತಪಡಿಸಿದರು.

ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಾನು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲ. ಅವಕಾಶ ದೊರೆತಲ್ಲಿ, ನನ್ನ ಕುಟುಂಬದವರ ಸಹ ಕಾರವಿದ್ದಲ್ಲಿ ಸ್ಪರ್ಧೆ‌ ಕುರಿತು ನಾನು ಸಮಾಲೋಚನೆ ನಡೆಸುವೆ ಎಂದರು. ಲೋಕಸಭಾ ಚುನಾವಣೆ ಹತ್ತರದಲ್ಲಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ನನ್ನ ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಜಗಳೂರು ತಾಲ್ಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದನ್ನು ನಾನು ಮರೆತಿಲ್ಲ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರು ಆಯ್ಕೆಯಾಗಿದ್ದು. ಯಾವುದೇ ಸಂದರ್ಭದಲ್ಲಿ ನಮ್ಮ‌ ಮನೆಗೆ ಆಗಮಿಸಿ ಅಹವಾಲು ಸಲ್ಲಿಸಿದರೂ ಈಡೇರಿಸಲು ಬದ್ದ ಎಂದು ಭರವಸೆ ನೀಡಿದರು.

ಶಾಸಕ ದೇವೇಂದ್ರಪ್ಪ ಅವರು ಸಾವಿರಾರು ಮಹಿಳೆಯರಿಗೆ ಬಾಗಿನ ಕೊಡುವ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಿಸಿರುವುದು ಸಂತೋಷವಾಗಿದೆ ಎಂದು ಪ್ರಭಾ ಶ್ಲ್ಯಾಘಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಎಸ್.ಮಂಜುನಾಥ್, ಪ.ಪಂ. ಸದಸ್ಯರಾದ ರಮೇಶ್ ರೆಡ್ಡಿ, ಶಕೀಲ್ ಅಹಮದ್, ಮಂಜುನಾಥ್, ಮುಖಂಡರಾದ ಸುರೇಶ್ ಗೌಡ, ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಗೌಸ್, ಕೀರ್ತಿಕುಮಾರ್ ಮುಂತಾದವರು ಇದ್ದರು.

error: Content is protected !!