ಮಲೇಬೆನ್ನೂರು ಆ 23 : ಹರಿಹರದ ನಂದಿತಾವರೆ ಮನೆಯೊಂದರಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ : ಆ.11 ರಂದು ರಾತ್ರಿ ಯಾರೋ ಕಳ್ಳರು ನಂದಿತಾವರೆ ಗ್ರಾಮದ ನಾಗಮ್ಮ ಎಂಬುವವರ ಮನೆ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000 ರೂ ನಗದು ಹಣ ಹಾಗೂ 2,16,000 ರೂ. ಬೆಲೆಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್ ಬಸವರಾಜ ಅವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಹಾಗೂ ಮಲೇಬೆನ್ನೂರು ಪಿ ಎಸ್ ಐ ಪ್ರಭು ಕೆಳಗಿನಮನಿ ನೇತೃತ್ವದಲ್ಲಿ ಪೊಲೀಸ್ ತಂಡ ಮಹಮ್ಮದ್ ಕರೀಂ (ಶಿವಮೊಗ್ಗ), ಮಹಮ್ಮದ್ ಶಾಬಾಜ್ (ಶಿವಮೊಗ್ಗ), ತಬ್ರೇಜ್ ಅಹಮ್ಮದ್ (ಶಿವಮೊಗ್ಗ) ಎಂಬುವರನ್ನು ಬಂಧಿಸಿದೆ.
ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 38 ಗ್ರಾಂ ತೂಕದ ಸುಮಾರು 1,90,000 ಬೆಲೆ ಬಾಳುವ ಬಂಗಾರದ ಆಭರಣಗಳು, 3000 ರೂ ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.