ದಾವಣಗೆರೆ, ಆ. 23- ಚಂದಿರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಅತೀವ ಸಂತಸ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಹೇಳಿದ್ದಾರೆ.
ನಾವು ಬಾಲಕರಿದ್ದಾಗ ಕೇಳುತ್ತಿದ್ದ ಜನಪ್ರಿಯ ಕಥೆ ನೆನಪಾಗುತ್ತಿದೆ. `ಚಂದಿರನ ಅಂಗಳ’ ಕ್ಕೆ ಇಳಿಯಲು ಭಾರತದ “ಚಂದ್ರಯಾನ-3 ಜೊತೆ ರಷ್ಯಾ ದಿಢೀರನೇ ತನ್ನ ಯೋಜನೆ ಘೋಷಿಸಿ ಭಾರತಕ್ಕಿಂತ ಒಂದು ದಿನ ಮೊದಲೇ ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದು ಮೊದಲ ರಾಷ್ಟ್ರ ಎನ್ನುವ ಕೀರ್ತಿ ಗಳಿಸುವ ಪ್ರಯತ್ನದಲ್ಲಿ ವಿಫಲವಾಗಿದ್ದು, ಎಲ್ಲರಿಗೂ ನಿರಾಸೆಯಾಯಿತು.
ಜುಲೈ 14ರಂದು ಆರಂಭಿಸಿದ ನಮ್ಮ ನೌಕೆ ಯಶಸ್ವಿಯಾಗಿ ನಿಗದಿತ ಗುರಿ ತಲುಪಿದಾಗ ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಈ ಐತಿಹಾಸಿಕ ಸಾಧನೆಗೆ, ಭಾರತದ ವಿಜ್ಞಾನಿಗಳ ಪರಿಶ್ರಮ ಮತ್ತು ಪ್ರತಿಭೆಗೆ ಹೆಮ್ಮೆ ಪಡುವಂತಾಯಿತು.
`ಚಂದ್ರಯಾನ 2′ ವಿಫಲವಾದ ನಾಲ್ಕು ವರ್ಷಗಳಲ್ಲಿ ಮತ್ತೊಮ್ಮೆ ಸಾಹಸ ಗೈದ, ಸಂಪೂರ್ಣ ಭಾರತದಲ್ಲಿಯೇ ತಯಾರಾದ ನಮ್ಮ ನೌಕೆ ಎಲ್ಲಾ ಅಡೆತಡೆಗಳನ್ನು ಮೀರಿ ಯಶಸ್ವಿ ಯಾಯಿತು. ಅವಸರದಲ್ಲಿ ಓಡಿದ ಮೊಲದ ಪರಿಸ್ಥಿತಿ ರಶಿಯಾ ದೇಶದ್ದಾದರೆ, ಭಾರತ ಯೋಜನಾ ಬದ್ಧವಾಗಿ ರಷ್ಯಾಗಿಂತ ಸುಮಾರು ಒಂದು ಸಾವಿರ ಕೋಟಿ ರೂಗಳಗಿಂತಲೂ ಕಡಿಮೆ ಹಣದಲ್ಲಿ ಚಂದ್ರನ ಅಂಗಳ ತಲುಪಲು ಯಶಸ್ವಿಯಾದ ರೀತಿ ಮೊಲ – ಆಮೆ ಪಂದ್ಯ ನೆನಪಿಸಿತು ಎಂದು ತಿಳಿಸಿದ್ದಾರೆ.