ಭತ್ತದ ಬೆಳೆ ನಿರ್ವಹಣಾ ಕ್ರಮ ಅನುಸರಿಸಲು ಕೃಷಿ ಇಲಾಖೆ ಸಲಹೆ

ಭತ್ತದ ಬೆಳೆ ನಿರ್ವಹಣಾ ಕ್ರಮ ಅನುಸರಿಸಲು ಕೃಷಿ ಇಲಾಖೆ ಸಲಹೆ

ದಾವಣಗೆರೆ, ಆ.22- ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ನೀರಾವರಿ ಮೂಲಗಳಿಂದ ಭತ್ತದ ನಾಟಿ ಕಾರ್ಯ ಪ್ರಗತಿಯಲ್ಲಿದ್ದು, ರೈತ ಬಾಂಧವರು ಈ ಕೆಳಗಿನಂತೆ  ಬೆಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. 

ಆಗಸ್ಟ್ ಎರಡನೇ ಪಾಕ್ಷಿಕದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವಾಗ ಪ್ರತಿ ಗುಣಿಗೆ 3 – 4 ರಂತೆ ಸಸಿಗಳನ್ನು ನಾಟಿ ಮಾಡಬೇಕು.

ಒಂದು ವೇಳೆ 50 ಕ್ಕೂ ಹೆಚ್ಚು ದಿವಸದ ಸೋನಾ ಮಸೂರಿ ಭತ್ತದ ಸಸಿಗಳನ್ನು ನಾಟಿ ಮಾಡುವುದು ಅನಿವಾರ್ಯವಾದಲ್ಲಿ ಸಸಿಗಳ ಕುಡಿ ಚಿವುಟಿ ನಾಟಿ ಮಾಡಬೇಕು.  ಅಲ್ಲದೇ ಪ್ರತಿ ಗುಣಿಗೆ 5 – 6 ಸಸಿಗಳನ್ನು ನಾಟಿ ಮಾಡುವುದು ಉತ್ತಮ.

ಒಂದು ವೇಳೆ  ಆರ್‌ಎನ್ಆರ್–15048 ಭತ್ತದ ತಳಿಯ ಸಸಿಗಳನ್ನು ಯಾವುದೇ ಕಾರಣಕ್ಕೂ 40 ದಿನಕ್ಕೂ ಹೆಚ್ಚಿನ ವಯಸ್ಸಿನ ಸಸಿಗಳನ್ನು ನಾಟಿ ಮಾಡ ಬಾರದು.  ಒಂದು ವೇಳೆ  ಬಳಸಿದಲ್ಲಿ ಇಳುವರಿ ಗಣನೀ ಯವಾಗಿ ಕುಂಠಿತಗೊಳ್ಳುತ್ತದೆ. ಹೆಚ್ಚು ವಯಸ್ಸಿನ ಸಸಿಗ ಳನ್ನು ನಾಟಿ ಮಾಡುವ ಸಂದರ್ಭದಲ್ಲಿ ಶಿಫಾರಸ್ಸು ಮಾಡಿದ ಸಾರಜನಕ ರಸಗೊಬ್ಬರವನ್ನು ಸುಮಾರು ಶೇ.25 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗೆ ಒದಗಿಸಬೇಕು ಮತ್ತು ಕಡಿಮೆ ಅಂತರದಲ್ಲಿ ನಾಟಿ ಮಾಡಬೇಕು. 

ಭತ್ತದ ಸಸಿಗಳನ್ನು ಸಾಲಿನಿಂದ ಸಾಲಿಗೆ 20 ಸೆಂ.ಮೀ. ಮತ್ತು ಗಿಡದಿಂದ ಗಿಡಕ್ಕೆ  10 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.  ಒಂದು ವೇಳೆ ಸಾಲು ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಪ್ರತಿ ಚದರ ಮೀಟರಿಗೆ ಕನಿಷ್ಟ 50 ಗುಣಿಗಳನ್ನು ಕಾಪಾಡಿಕೊಳ್ಳಬೇಕು.  ಪ್ರತಿ ಗುಣಿಯಲ್ಲಿ 4 – 5 ಸಸಿಗಳನ್ನು ನಾಟಿ ಮಾಡುವುದು ಉತ್ತಮ.

ಸಾರಜನಕದ ಜೊತೆಗೆ ರಂಜಕ ಮತ್ತು ಪೊಟ್ಯಾಷ್ ಗೊಬ್ಬರವನ್ನು ಮೂಲ ಗೊಬ್ಬರವಾಗಿ ಪೂರೈಸುವುದು. 

ಕಡಿಮೆ ತೆಂಡೆಗಳನ್ನು    ಕೊಡುವ ತಳಿಗಳ ಬೆಳೆ ಗಳಿಗೆ ಪ್ರಾರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಕೊಡಬಾರದು. ದೀರ್ಘಾವಧಿ ತಳಿಗಳಿಗೆ ಮೇಲು ಗೊಬ್ಬರವಾಗಿ ಶಿಫಾರಸ್ಸಿನ ಅನ್ವಯ ಸಾರಜನಕ ಕೊಡುವುದು ಉತ್ತಮ. ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ಜೈವಿಕ ಶಿಲೀಂಧ್ರ ನಾಶಕಗಳಾದ ಟ್ರೈಕೋಡರ್ಮಾ ಮತ್ತು ಸುಡೋಮೋನಾಸ್‌ಗಳನ್ನು ಪ್ರತಿ ಲೀಟರ್ ನೀರಿಗೆ  5 ಗ್ರಾಂ ನಂತೆ ಬೆರೆಸಿ ತಯಾರಿಸಿದ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು.

ನಾಟಿ ಮಾಡಿದ 5-7 ದಿನಗಳಲ್ಲಿ ಕಳೆ ನಾಶಕಗಳಾದ ಪ್ರೊಪ್ಯಾನಿಲ್ 35 ಇ.ಸಿ ಪ್ರತಿ ಎಕರೆಗೆ 3.0 ಲೀ ಅಥವಾ ಅನಿಲೋಫಾಸ್ 600 ಮಿ.ಲೀ ದ್ರಾವಣಗಳನ್ನು ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ ಸಿಂಪರಣಾ ದ್ರಾವಣವು ಸುಮಾರು 250 ರಿಂದ 300 ಲೀ ಬೇಕಾಗುತ್ತದೆ  ಅಥವಾ  ಬ್ಯೂಟಾಕ್ಲೋರ್ ಶೇ.5 ರ ಹರಳನ್ನು ಎಕರೆಗೆ 12 ಕೆ.ಜಿ ಬಳಸಬೇಕು ಅಥವಾ ಸಂಯುಕ್ತ ಕಳೆನಾಶಕವಾದ ಬೆನ್ ಸಲ್ಫೂರಾನ್ ಮಿಥೈಲ್ + ಪ್ರೆಟಿಲಾಕ್ಲೋರ್ 6% ಜಿ ಯನ್ನು ಪ್ರತಿ ಎಕರೆಗೆ 5 ಕೆ.ಜಿ ಯಂತೆ ನಾಟಿ ಮಾಡಿದ 3 – 5 ದಿನಗಳಲ್ಲಿ ನೇರವಾಗಿ ಮಣ್ಣಿಗೆ  ಸೇರಿಸಬೇಕು

ಊದಿನಕಡ್ಡಿ/ಕಣೆ ನೊಣದ ಬಾಧೆಯನ್ನು ತಡೆಗಟ್ಟಲು ಸಸಿಗಳನ್ನು ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಕ್ಲೋರೊಪೈರಿಪಾಸ್ ಸೇರಿಸಿ ತಯಾರಿಸಿದ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು ಎಂದು  ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!