ದಿನಗೂಲಿ ನೌಕರರ ಪ್ರತಿಭಟನೆ ಮುಂದೂಡಿಕೆ

ದಿನಗೂಲಿ ನೌಕರರ ಪ್ರತಿಭಟನೆ ಮುಂದೂಡಿಕೆ

ರೈತರ ಹಿತಕ್ಕಾಗಿ ತೀರ್ಮಾನ  ಮಲೇಬೆನ್ನೂರಿನಲ್ಲಿ ಎ.ಕೆ. ಆಂಜನೇಯ

ಮಲೇಬೆನ್ನೂರು, ಆ.22- ಇಲ್ಲಿನ ಭದ್ರಾ ನಾಲಾ ನಂ. 3 ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಕಛೇರಿ ವ್ಯಾಪ್ತಿಯ ದಿನಗೂಲಿ ನೌಕರರು ಬಾಕಿ ವೇತನಕ್ಕೆ ಆಗ್ರಹಿಸಿ, ಕಳೆದ 7 – 8 ದಿನಗಳಿಂದ ನಡೆಸುತ್ತಾ ಬಂದಿದ್ದ ಪ್ರತಿಭಟನೆಯನ್ನು ರೈತರ ಹಿತದೃಷ್ಟಿಯಿಂದ ಮಂಗಳವಾರ ತಾತ್ಕಾಲಿಕವಾಗಿ ಮುಂದೂಡಿದರು.

ಅಲ್ಲದೆ, ಭದ್ರಾ ಅಧೀಕ್ಷಕ ಇಂಜಿನಿಯರ್‌ ಮತ್ತು ಭದ್ರಾ ಮುಖ್ಯ ಇಂಜಿನಿಯರ್‌ ಅವರು ನಮ್ಮ ವೇತನ ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ತಿಗೊಳಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ ತಿಳಿಸಿದ್ದಾರೆ.

ಭದ್ರಾ ಅಚ್ಚುಕಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ನಾಲೆಗಳಿಗೆ ನೀರು ಬಿಡುಗಡೆ ಮಾಡಿರುವುದರಿಂದ ನೀರು ನಿರ್ವಹಣೆ ಇಲ್ಲದ ಕಾರಣ ಕೊನೆ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಈ ಬಗ್ಗೆ ರೈತರು ನಮ್ಮ ಪ್ರತಿಭಟನೆ ವೇಳೆ ಆಗಮಿಸಿ ನಮಗೆ ಬೆಂಬಲ ನೀಡುವುದರ ಜೊತೆಗೆ ಮೇಲಾಧಿಕಾರಿಗಳ ಮೇಲೆ ಒತ್ತಡ ಹಾಕಿ, ಕೂಡಲೇ ಬಾಕಿ ವೇತನ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಜೊತೆಗೆ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ್ರು ಮತ್ತು ನಂದಿಗಾವಿ ಶ್ರೀನಿವಾಸ್‌ ಅವರು ನೀರಾವರಿ ನಿಗಮದ ಎಂಡಿ ಗೆ ಜಲಸಂಪನ್ಮೂಲ ಸಚಿವರಿಂದ ಒತ್ತಡ ಹಾಕಿಸಿ ನಮಗೆ ಶೀಘ್ರ ವೇತನ ನೀಡುವಂತೆ ಹೇಳಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಈ ದಿನ  ಪ್ರತಿಭಟನೆಯನ್ನು ಸೆಪ್ಟೆಂಬರ್ 11 ರವರೆಗೆ ಮುಂದೂಡಿ ಬುಧವಾರದಿಂದ ನೀರಿನ ನಿರ್ವಹಣೆಗೆ ಗಮನ ಹರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

error: Content is protected !!