ವಾಶಿ , ಆ. 22- `ತುಮಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನ ಭಾರತದ ಬೇರೆ ಬೇರೆ ಪ್ರಮುಖ ರಾಜ್ಯಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆದಿದ್ದು, ಪ್ರೌಢಶಾಲೆಯ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ರಂಗಾಸಕ್ತರು, ಶಾಸ್ತ್ರೀಯ ನೃತ್ಯ ಬಲ್ಲವರು ಈ ನೃತ್ಯವನ್ನು ನೋಡಿ ಬಸವ ತತ್ವಕ್ಕೆ ಮಾರುಹೋಗಿದ್ದಾರೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿನ ಮರಾಠಿ ಸಾಹಿತ್ಯ ಮಂದಿರ ಸಭಾಂಗಣದಲ್ಲಿ ನವಿ ಮುಂಬಯಿಯ ಶರಣ ಸಂಕುಲ ಸೇವಾ ಮಂಡಳಿ, ಮುಂಬಯಿ ಕನ್ನಡ ಕಲಾ ಕೇಂದ್ರ ಹಾಗೂ ಲಕ್ಷ್ಮೇಶ್ವರದ ಎಂ.ಜಿ.ಎಂ ಫೌಂಡೇಶನ್‍ನ ಸಂಯುಕ್ತಾಶ್ರಯದಲ್ಲಿ ನಡೆದ `ತುಮಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಬಸವಣ್ಣನವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡವರು. ವಿಶ್ವದ ಯಾವುದೇ ನೇತಾರರು ಇದುವರೆಗೂ ಬಸವಣ್ಣನವರ ಬಗ್ಗೆ ಮಾತನಾಡಿದ್ದು ಕಂಡಿರಲಿಲ್ಲ. ಆದರೆ ಮೋದಿಜಿಯವರು ಭಾರತದ ಪ್ರಪ್ರಥಮ ಪಾರ್ಲಿಮೆಂಟ್ 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಾರಂಭವಾಯಿತು ಎಂದು ಹೇಳಿದರು. ನಾವೆಲ್ಲ ಬಸವಣ್ಣ ಅಂತ ಕರೆದರೆ ಮೋದಿಜಿಯವರು ಜಗದ್ಗುರು ಬಸವಣ್ಣ ಅಂತ ಕರೆಯುತ್ತಾರೆ. ಹಾಗಾದರೆ ಜಗದ್ಗುರು ಅಂದರೆ ಸನ್ಯಾಸಿಗಳೋ, ಮಠವನ್ನು ಪ್ರಾರಂಭ ಮಾಡಿದವರೋ ಅಥವಾ ಧಾರ್ಮಿಕ ಸಂತರೋ ಅಂತ ಕೇಳಿದರೆ, ಬಸವಣ್ಣನವರು ಸನ್ಯಾಸಿಗಳಲ್ಲ ಸಂಸಾರಿಗಳು. ಯಾವುದೇ ಮಠವನ್ನು ಕಟ್ಟಿದವರಲ್ಲ. ಸಂತರಂತೂ ಅಲ್ಲವೇ ಅಲ್ಲ. ಹಾಗಾದರೆ ಅವರಿಗೆ ವಿಶ್ವ ಜಗದ್ಗುರು ಅಂತ ಗೌರವ ಬಂದದ್ದು ಜಗದ್ಗುರು, ಸಂತ, ಸನ್ಯಾಸಿಗಳು ಮಾಡದೇ ಇರುವಂಥ ಕಾರ್ಯವನ್ನು ಮಾಡಿದ್ದರಿಂದ ಎಂದು ತಿಳಿಸಿದರು.
ಭಗವಂತನನ್ನು ಕಾಣಲಿಕ್ಕೆ ಗುಡಿಗುಂಡಾರಗಳಿಗೆ ಸುತ್ತುವ ಅಗತ್ಯವಿಲ್ಲ. ಬದಲಾಗಿ ನಿನ್ನ ದೇಹವೇ ದೇವಾಲಯವಾಗಬೇಕು ಎಂದು ಬಸವಣ್ಣನವರು ಹೇಳಿದರು. ತಂದೆ ನೀನು, ತಾಯಿ ನೀನು… ಕೊನೆಯ ಸಾಲಿನಲ್ಲಿ `ನೀನಲ್ಲದೇ ಮತ್ತಾರೂ ಇಲ್ಲವಯ್ಯಾ’ ಎನ್ನುವ ವಾಕ್ಯವನ್ನು ‘ತುಮ್ಹಾರೆ ಸಿವಾ ಔರ್ ಕೋಹಿ ನಹೀ’ ಎನ್ನುವ ನೃತ್ಯದ ಮೂಲಕ ನಮ್ಮ ಕಲಾವಿದರು ಪ್ರದರ್ಶನ ಮಾಡುತ್ತಾರೆ.
2019ರಲ್ಲಿ ಇದೇ ನೃತ್ಯವನ್ನು ಸಾಣೇಹಳ್ಳಿಯ ನಮ್ಮ ಶಾಲೆಯ ನೂರು ಜನ ಮಕ್ಕಳು ಬಾಂಬೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ್ದರು. ಈಗ ನೋಡುತ್ತಿರುವ ನೃತ್ಯಕ್ಕೂ ಆಗ ಮಾಡಿದ ನೃತ್ಯಕ್ಕೂ ತುಂಬಾ ಅಂತರವನ್ನು ಕಾಣುತ್ತೀರಿ. ಇಲ್ಲಿ ಭಾವಕ್ಕೆ ಹೆಚ್ಚು ಒತ್ತನ್ನು ಕೊಡುತ್ತಾರೆ. ಎಷ್ಟೋ ಸಂದರ್ಭದಲ್ಲಿ ಭಾಷೆ ಇಲ್ಲದೆಯೇ ಭಾವವನ್ನು ವ್ಯಕ್ತಪಡಿಸಬಹುದು ಎಂದರು.
ಕನ್ನಡದ ವಚನಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ ಮುಂಬಯಿಯ ಅನುವಾದಕ ಸುರೇಶ್‍ರಾವ್ ಮತ್ತು ಡಾ. ಕುಲವಂತ್ ಸಿಂಗ್ ಅವರನ್ನು ಅಭಿನಂದಿಸಲಾಯಿತು. ನವಿ ಮುಂಬಯಿಯ ಶರಣ ಸಂಕುಲ ಸೇವಾ ಮಂಡಳಿಯ ಉಮಾಪತಿ ಕೆ. ಆರ್, ಮುಂಬಯಿ ಕನ್ನಡ ಕಲಾ ಕೇಂದ್ರದ ಮಧುಸೂದನ್ ಟಿ. ಆರ್, ಲಕ್ಷ್ಮೇಶ್ವರದ ಎಂ.ಜಿ.ಎಂ ಫೌಂಡೇಶನ್‍ನ ವಿಶ್ವನಾಥ್ ಹೆಚ್. ಮಹಂತಶೆಟ್ಟರ್ ಹಾಗೂ ಶ್ರೀನಿವಾಸ ಜಿ. ಕಪ್ಪಣ್ಣ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.