`ಪಿಎಂಶ್ರೀ’ ಯೋಜನೆ: 3.71 ಕೋಟಿ ಅನುದಾನ

`ಪಿಎಂಶ್ರೀ’ ಯೋಜನೆ: 3.71 ಕೋಟಿ ಅನುದಾನ

ದಾವಣಗೆರೆ, ಆ. 22- ಕೇಂದ್ರ ಸರ್ಕಾರವು ಪಿ.ಎಂ. ಶ್ರೀ ಶಾಲೆಗಳು ಎಂಬ ಹೊಸ ಕೇಂದ್ರ ಪುರಸ್ಕೃತ ಯೋಜನೆಯನ್ನು ಜಾರಿಗೆ ತಂದಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ 7 ಶಾಲೆಗಳ ಅಭಿವೃದ್ದಿಗಾಗಿ ತಲಾ 53 ಲಕ್ಷ ರೂ.ಗಳಂತೆ ಒಟ್ಟು 3.71 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

2022-23 ನೇ ಸಾಲಿನಿಂದ 2026-2027 ನೇ ಸಾಲಿನವರೆಗೆ ಸುಮಾರು 14500 ಶಾಲೆಗಳನ್ನು ಮೂಲಭೂತವಾಗಿ ಬಲಪಡಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಾಗಿ ಸರ್ಕಾರ 27360 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಮೊದಲನೇ ಹಂತದಲ್ಲಿ ರಾಜ್ಯದ 129 ಶಾಲೆಗಳು ಪಿ.ಎಂ.ಶ್ರೀ ಯೋಜನೆಯಡಿ ಆಯ್ಕೆಯಾಗಿವೆ. ದಾವಣಗೆರೆಯ ಜಿಲ್ಲೆಯ 7 ಶಾಲೆಗಳು ಈ ಯೋಜನೆಗೆ ಆಯ್ಕೆಯಾಗಿವೆ .

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಶಾಲೆ,  ಹರಿಹರ ತಾಲ್ಲೂಕಿನ ದೊಗ್ಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ತಾಲ್ಲೂಕಿನ ಹಳೆಬಾತಿ ಗುಡ್ಡದ ಕ್ಯಾಂಪ್ ಶಾಲೆ, ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಶಾಲೆ, ಜಗಳೂರು ತಾಲ್ಲೂಕಿನ ತಮಲೇಹಳ್ಳಿ ಹಾಗೂ ರಾಮಘಟ್ಟ ಶಾಲೆಗಳು ಈ ಯೋಜನೆಯಡಿ ಆಯ್ಕೆಯಾಗಿವೆ.

ಆಯ್ಕೆಯಾಗಿರುವ ಪ್ರತಿಯೊಂದು ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಬಾಲಕರ ಹಾಗೂ ಬಾಲಕಿಯರ ಶೌಚಾಲಯ, ಬೋಧನಾ ಸಿಬ್ಬಂದಿ ಮತ್ತು ಸಾಮರ್ಥ್ಯ ಅಭಿವೃದ್ದಿ, ಪ್ರಧಾನಮಂತ್ರಿ ಪೋಷಣ್ ಅಭಿಯಾನ, ಕಲಿಕಾ ಫಲಕಗಳು, ಹಸಿರು ಉಪಕ್ರಮಗಳು ಇತರೆ ಶಾಲಾ ಚಟುವಟಿಕೆಗಳಿಗೆ ಈ ಅನುದಾನ ಬಳಸಲಾಗುತ್ತದೆ. 

ಎರಡನೇ ಹಂತದಲ್ಲಿ ಶಾಲೆಗಳನ್ನು ಆಯ್ಕೆ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆಯಾ ಶಾಲೆಗಳವರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆದು ಛಾಲೆಂಜ್ ಮೆಥಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!