ಚಿತ್ರದುರ್ಗ; ಕಲುಷಿತ ನೀರು ಸೇವಿಸಿ ಸಾವು: ಮಾಹಿತಿ ಪಡೆದ ಸಿಎಂ

ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ, ತನಿಖಾ ತಂಡ ರಚನೆ

ಚಿತ್ರದುರ್ಗ, ಆ.2- ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದು, ಅಸ್ವಸ್ಥಗೊಂಡವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಮೃತರು ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ನಿವಾಸಿಗಳು.

ಮಂಗಳವಾರ ಈ ಘಟನೆ ನಡೆದಿದ್ದು, ನಗರಸಭೆಯಿಂದ ಪೂರೈಕೆಯಾಗುವ ನೀರನ್ನು ಸೇವಿಸ ದಂತೆ ಸ್ಥಳೀಯ ನಿವಾಸಿಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನೀರು ಕಲುಷಿತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಅಸ್ವಸ್ಥಗೊಂಡವರು ಕುಡಿದ ನೀರು, ಮಲ-ಮೂತ್ರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಾಹಿತಿ ಪಡೆದ ಮುಖ್ಯಮಂತ್ರಿ: ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಯಿಂದ ಬುಧವಾರ ಮಾಹಿತಿ ಪಡೆದಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡವೊಂದನ್ನು ರಚಿಸಲಾಗಿದೆ. ಮೂರು ದಿನಗಳ ಒಳಗಾಗಿ ವರದಿ ನೀಡುವಂತೆ ಕಾಲಮಿತಿ ನಿಗದಿಪಡಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಕೇಳಿದ್ದರು. ಕವಾಡಿಗರಹಟ್ಟಿಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸೂಚನೆಯ ಮೇರೆಗೆ ತನಿಖಾ ತಂಡ ರಚನೆಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಸೇರಿ ಅನೇಕರು ತನಿಖಾ ತಂಡದಲ್ಲಿದ್ದಾರೆ. ಘಟನೆಯ ಕುರಿತು ವಿಶ್ಲೇಷಣೆ ಮಾಡಿ ತುರ್ತು ತನಿಖಾ ವರದಿಯನ್ನು ನೀಡಲಿದ್ದಾರೆ. ಇದರ ಆಧಾರದ ಮೇರೆಗೆ ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ನಗರ ವ್ಯಾಪ್ತಿಯ ಎಲ್ಲ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಸ್ವಚ್ಛತೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 15 ದಿನಕ್ಕೊಮ್ಮೆ ನೀರಿನ ಶುದ್ಧತೆ ಖಚಿತಪಡಿಸಿಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

error: Content is protected !!