ಸ್ಪರ್ಧೆಗಳು ಮಾನವೀಯತೆಯ ಎಲ್ಲೆ ಮೀರಬಾರದು

ಸ್ಪರ್ಧೆಗಳು ಮಾನವೀಯತೆಯ ಎಲ್ಲೆ ಮೀರಬಾರದು

ಸಾಣೇಹಳ್ಳಿ, ಜೂ. 25-  ಸ್ಪರ್ಧೆಗಳು ಮಾನವೀಯತೆಯ ಎಲ್ಲೆಯನ್ನು ಮೀರಬಾ ರದು. ಅನಗತ್ಯವಾಗಿ ಪ್ರಾಣಿಗಳಿಗೆ ಹಿಂಸೆ ಕೊಡಬಾರದು. ಸ್ಪರ್ಧೆಯ ಸಂದರ್ಭದಲ್ಲಿ ಎತ್ತುಗಳಿಗೆ ಚಾಟಿ ಏಟು ನೀಡಿದರೆ ನಮ್ಮ ಹೃದಯಕ್ಕೆ ಕೊಟ್ಟಂತೆ ಭಾಸವಾಗುತ್ತದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯಲ್ಲಿ ಯುವಕರು ನಿನ್ನೆ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

`ದಯವಿಲ್ಲದ ಧರ್ಮ ಅದಾವುದಯ್ಯ’ ಎಂದು ಹನ್ನೆರಡನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಬಸವಣ್ಣನವರು ಪ್ರಶ್ನಿಸಿದ್ದಾರೆ. ಇದರರ್ಥ ಸಕಲ ಜೀವಿಗಳಲ್ಲಿಯೂ ದಯೆ ತೋರಬೇಕು. ಎಲ್ಲಾ ಸಂದರ್ಭಗಳಲ್ಲೂ ದಯೆಯನ್ನು ಅನುಕರಣೆ ಮಾಡಲು ಸಾಧ್ಯವಿಲ್ಲ. ಹಾಗಂತ ಪ್ರಾಣಿಗಳಿಗೆ ಅನಗತ್ಯವಾಗಿ ಹಿಂಸೆ ಕೊಡಬಾರದು ಎಂದರು.

ಎತ್ತಿನ ಗಾಡಿಗಳ ಈ ಸ್ಪರ್ಧೆಯು ಎತ್ತುಗಳ ಬಗೆಗಿನ ಕಾಳಜಿ ವಹಿಸುವಂತೆ ಮಾಡುತ್ತದೆ. ಅಲ್ಲದೇ ನಮ್ಮ ಪರಂಪರೆಯನ್ನು ಪೋಷಿಸುತ್ತದೆ. ಯುವಕರ ಈ ಉತ್ಸಾಹ ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವಂತಾಗಬೇಕು ಎಂದು ಶ್ರೀಗಳು ಹಿತ ನುಡಿದರು.

ಸಾಣೇಹಳ್ಳಿ ಶ್ರೀಮಠ ಹಾಗೂ ಕಲಾ ಸಂಘದಿಂದ ವರ್ಷಪೂರ್ತಿ ನಿರಂತರವಾಗಿ ಸಾತ್ವಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕ್ರೌರ್ಯದ, ಹಿಂಸೆಯ ಚಟುವಟಿಕೆಗಳಿಗಿಂತ ಸಾತ್ವಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಆಗ ಸಹಜವಾಗಿಯೇ ಪ್ರಾಣಿಗಳ ಬಗ್ಗೆ ಪ್ರೀತಿ ತಾನಾಗಿಯೇ ಮೂಡುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು. 

ಯುವ ಮುಖಂಡ ಹೆಬ್ಬಳ್ಳಿಯ ದಿಲೀಪ್ ಗುರುಸ್ವಾಮಿ ಮಾತನಾಡಿ, ಮುಂದಿನ ಪೀಳಿಗೆಗೆ ಜಾನಪದ ಸೊಗಡನ್ನು ಪರಿಚಯ ಮಾಡಿಕೊಡುವ ಕೆಲಸವನ್ನು ಸಾಣೇಹಳ್ಳಿಯ ಯುವಕರು ಮಾಡುತ್ತಾ ಇರುವುದು ಸಂತೋಷ. ನೈತಿಕತೆ, ಪ್ರಾಮಾಣಿಕತೆಯೇ ನಮ್ಮ ಸಂಸ್ಕೃತಿಯಲ್ಲಿದೆ. ನೈತಿಕತೆ, ಪ್ರಾಮಾಣಿಕತೆಯನ್ನು ಪ್ರತಿಯೊಬ್ಬ ಯುವಕರು ರೂಢಿಸಿಕೊಳ್ಳಬೇಕೆಂದರು.

ರಾಜ್ಯದ ಮೂಲೆ ಮೂಲೆಯಿಂದ ಸುಮಾರು ಐವತ್ತು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಬೌರ್ಯ ಮತ್ತು ಬ್ರಾಂಡ್ ಅಣ್ಣಪ್ಪ ಸಾಣೇಹಳ್ಳಿ, ದ್ವಿತೀಯ ಬಹುಮಾನವನ್ನು  ಇಂದ್ರ ಮತ್ತು ಬೀರ ಮಂಡ್ಯ, ತೃತೀಯ ಬಹುಮಾನವನ್ನು ಮಹಾರಾಜ ಮತ್ತು ಜಗ್ಗು, ಚಿಕ್ಕಮಗಳೂರು, ಚತುರ್ಥ ಬಹುಮಾನವನ್ನು ಸರ್ಜ ಮತ್ತು ಕಲ್ಕಿ ಅಜ್ಜಂಪುರ ಪಡೆದುಕೊಂಡವು. 

error: Content is protected !!