ಉಪನ್ಯಾಸಕರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ
ಚನ್ನಗಿರಿ, ಜೂ.25- ದೇಶದ ಭವಿಷ್ಯದ ಮಾನವ ಸಂಪನ್ಮೂಲ ವಾಗ ಲಿರುವ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿ ಹಾಗೂ ಆತ್ಮಸ್ಥೈರ್ಯ ತುಂಬುವ ಮೂಲಕ ದೇಶದ ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸುವುದು ಅಧ್ಯಾಪಕರ ಕರ್ತವ್ಯವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.
ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ಎಸ್ಎಸ್ ಚಟುವಟಿಕೆ ಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೇ ಈ ಕಾಲೇಜಿಗೆ ಹೆಚ್ಚು ಪ್ರವೇಶ ಪಡೆಯುವುದರಿಂದ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಆದ್ಯತೆ ನೀಡಬೇಕು. ಸಂಸ್ಕಾರ, ಸಾಮಾನ್ಯ ಜ್ಞಾನ ನೀಡದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆಸಕ್ತಿಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಒಳ್ಳೆಯ ವಾತಾವರಣ ಕಲ್ಪಿಸಬೇಕೆಂದರು.
ಪಠ್ಯದ ಜೊತೆಗೆ ಜೀವನ ಸಾರವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಹಿಂದೆ ಅನೇಕ ಜನಪದ ಆಟಗಳು ನಮ್ಮ ಭವಿಷ್ಯ ರೂಪಿಸುತ್ತಿದ್ದವು. ಆದರೆ ಇಂದು ಸ್ಮಾರ್ಟ್ಫೋನ್ಗಳನ್ನು ಮಕ್ಕಳ ಕೈಗಿಟ್ಟು ಅವರ ಭವಿಷ್ಯವನ್ನು ಹಾಳುಗೆಡುವುತ್ತಿದ್ದೇವೆ. ಮಕ್ಕಳು ಪ್ರಯತ್ನಗಳೇ ವಿನಃ ಫಲಗಳಲ್ಲ. ಹೀಗಾಗಿ ಮಕ್ಕಳ ಕೈಗೆ ಬಾಲ್ಯ ಕೊಡ ಬೇಕು. ನಾಳೆಗಳ ಬಗ್ಗೆ ತಿಳಿಹೇಳಬೇಕು. ಆಗ ದೇಶದ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುತ್ತಾರೆ ಎಂದರು.
ಬೀದಿ ದೀಪದ ಕೆಳಗೆ ಅಧ್ಯಯನ ನಡೆಸಿ ಸಾಕಷ್ಟು ಸಾಧನೆ ಮಾಡಿದ ಅನೇಕರು ಈಗಲೂ ನಮ್ಮ ಕಣ್ಣ ಮುಂದಿದ್ದಾರೆ. ಇವರಾರೂ ಕಾನ್ವೆಂಟ್ ಶಿಕ್ಷಣ ಪಡೆದವರಲ್ಲ. ಐಎಎಸ್, ಐಪಿಎಸ್ನಲ್ಲಿ ಶೇ.90ರಷ್ಟು ಉತ್ತೀರ್ಣರಾಗುವುದು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ. ಹೀಗಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಸರ್ಕಾರಿ ಶಾಲೆಗಳಲ್ಲಿಯೇ ಓದುವುದರಿಂದ ನೀವು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜು ಉನ್ನತೀಕರಣ ಆಗಬೇಕು. ಕಾಲೇಜಿಗೆ ಒಳ್ಳೆಯ ಹೆಸರು ಬರಬೇಕಾದರೆ ಉಪನ್ಯಾಸ ಕರು ಮತ್ತು ಪ್ರಾಂಶುಪಾಲರ ಶ್ರಮ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಮಕ್ಕಳಿಗೆ ಬದುಕು ಕಟ್ಟಿ ಕೊಳ್ಳುವ ಶಿಕ್ಷಣ ನೀಡಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಇದಾಯತ್, ರಮೇಶ್, ಲೋಕೇಶ್, ಸದ್ದಮ್ ಷಾ, ಅತಾವುಲ್ಲಾ, ಹೊನ್ನಪ್ಪ, ಹಾಲೇಶ್, ಅಲ್ಲಂಪಾಷಾ, ಖಲೀಲ್ ಅಹ್ಮದ್, ಸಂಚನಪ್ಪ, ಜಯ್ಯಪ್ಪ, ಪರಶುರಾಮಪ್ಪ, ಡಾ.ಹಾಲೇಶ್, ಶಶಿಕುಮಾರ್, ಗ್ರಾಪಂ ಅಧ್ಯಕ್ಷ ಶಿವಾಜಿ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.