ದಾವಣಗೆರೆ, ಜೂ. 6- 1973ನೇ ಇಸ್ವಿಯಿಂದ ಪ್ರತಿವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನ’ ವನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಪರಿಸರ ದಿನಾಚರಣೆಯ ಧ್ಯೇಯ `ಸಲ್ಯೂಷನ್ ಟು ಪ್ಲಾಸ್ಟಿಕ್ ಪಲ್ಯೂಷನ್’ ಆಗಿದ್ದು, ಇದನ್ನು ಅರ್ಥಪೂರ್ಣವಾಗಿಸಲು, ನಾವೆಲ್ಲರೂ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಾಗಿದೆ. ಈ ಮೂಲಕ ಪರಿಸರದಲ್ಲಿನ ನೂರಾರು ಜೀವರಾಶಿಗಳನ್ನು ಸಂರಕ್ಷಿಸಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು. ಪರಿಸರವನ್ನು ಉಳಿಸಬೇಕು ಎಂದು ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆವರಣದಲ್ಲಿ `ಸಮನ್ವಯ-2023′ ವಿದ್ಯಾರ್ಥಿ ಸಂಘದ ವತಿಯಿಂದ ಸಸಿಗಳನ್ನು ನೆಡುವುದರ ಮೂಲಕ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ವೈದ್ಯಕೀಯ ನಿರ್ದೇಶಕ ಡಾ. ಅರುಣ್ಕುಮಾರ್ ಅಜ್ಜಪ್ಪ, ಉಪ ಪ್ರಾಂಶುಪಾಲರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ, ವಿದ್ಯಾರ್ಥಿ ಸಂಘದ ಛೇರ್ಮನ್ ಡಾ. ವಿ.ಎಸ್. ಹರೀಶ್ಕುಮಾರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕೀರ್ತನ ಮತ್ತು ಋತು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಾಹಿತ್ಯ ಸಮಿತಿ ಛೇರ್ಮನ್ ಡಾ. ಯೋಗೇಶ್ ಬಾಬು ಸ್ವಾಗತಿಸಿದರು. ಭಾವನ್ ವಂದಿಸಿದರು.