ದಾವಣಗೆರೆ, ಜೂ. 6 – ನಗರದ ತಂಜೀಮ್ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ಪಿ.ಬಿ. ರಸ್ತೆಯ ಈದ್ಗಾ ಮೈದಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ತಂಜೀಮ್ ಸಂಸ್ಥೆಯ ಅಧ್ಯಕ್ಷ ದಾದಾಪೀರ್ ಸೇಠ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರ, ಗಿಡಗಳು ತಾವು ಸೂರ್ಯನ ತಾಪವನ್ನು ಸಹಿಸಿಕೊಂಡು ಎಲ್ಲರಿಗೂ ನೆರಳು ಹಾಗೂ ತಣ್ಣನೆ ಗಾಳಿಯನ್ನು ಒದಗಿಸಿ ನಮ್ಮ ಪರಿಸರಕ್ಕೆ ಅಮೂಲ್ಯ ಸೇವೆ ನೀಡುತ್ತವೆ ಎಂದು ಹೇಳಿದರು. ಪರಿಸರ ಪ್ರತಿಯೊಂದು ಜೀವಿಗೂ ಬಹಳ ಮುಖ್ಯವಾಗಿದೆ. ಹಸಿರಾದ ಭೂಮಿ ಈಗ ಕಡಿಮೆಯಾಗುತ್ತಿದೆ. ಭೂಮಿಯು ನಮ್ಮೆಲ್ಲರ ಮನೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ 50 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು ಎಂಬ ಘೋಷವಾಕ್ಯದ ಅನ್ವಯ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು ಜಾಗತಿಕ ತಾಪಮಾನ ಏರಿಕೆಯು ಒಂದು ದೊಡ್ಡ ಸವಾಲಾಗಿದ್ದು, ಜನರನ್ನು ಜಾಗೃತಗೊಳಿಸಿ ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಕೆ. ಅಮ್ಜದ್ ಉಲ್ಲಾ, ಕಾರ್ಯದರ್ಶಿ ಸಾಬೀರ್ ಅಲಿ ಖಾನ್, ಖಜಾಂಚಿ ದಾದಾಪೀರ್, ಷಂಶುದ್ದೀನ್ ರಜ್ಜಿ, ವಕೀಲರಾದ ಶೌಕತ್ ಅಲಿ, ಮೊಹಮ್ಮದ್, ಜಬೀವುಲ್ಲಾ ಐ.ಟಿ.ಐ, ಹೆಚ್ ಶಫಿವುಲ್ಲಾ, ಹಾಜಿ ಮೂಸಾ ಕಲೀಮುಲ್ಲಾ, ಇಮಾನ್ ರಜಾ, ಸನಾವುಲ್ಲಾ, ಇಮ್ತಿಯಾಜ್, ಬೇಗ್, ಜಬೀವುಲ್ಲಾ ವೈ ಹಾಗೂ ನಾಸೀರ್, ತಂಜೀಮುಲ್ ವಜೀರ್, ಮಹಬೂಬ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.