ರೈತರ ಜೀವನಮಟ್ಟ ಸುಧಾರಣೆಗಾಗಿ ಕಲ್ಯಾಣ ಕಾರ್ಯಕ್ರಮ

`ವಿಶ್ವ ಪಶುವೈದ್ಯಕೀಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ. ತ್ಯಾಗರಾಜನ್

ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗಕ್ಕೆ ತುತ್ತಾದಾಗ ಅವುಗಳ ಜೀವ ರಕ್ಷಣೆ ಮಾಡಿದರೆ, ಅದರಿಂದ ರೈತನಿಗೆ ಆದ ಸಂತೋಷ ನಮಗೂ ತೃಪ್ತಿ ನೀಡಲಿದೆ.

-ಡಾ. ಹೆಚ್.ಎಸ್. ಜಯಣ್ಣ,  ಅಪರ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ದಾವಣಗೆರೆ, ಜೂ. 6- ಗ್ರಾಮೀಣ ಆರ್ಥಿಕತೆ ಹೆಚ್ಚಿಸುವಲ್ಲಿ ಮತ್ತು ರೈತರ ಜೀವನ ಮಟ್ಟ ಸುಧಾರಣೆಯಲ್ಲಿ ಪಶುಸಂಗೋಪನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಕೆ. ತ್ಯಾಗರಾಜನ್ ಹೇಳಿದರು.

ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪ್ರಾಣಿ ದಯಾ ಸಂಘ, ಕರ್ನಾಟಕ ಪಶುವೈದ್ಯಕೀಯ ಸಂಘ ಇವರ ಸಂಯುಕ್ತಾ ಶ್ರಯದಲ್ಲಿ `ವಿಶ್ವ ಪಶುವೈದ್ಯಕೀಯ ದಿನಾಚರಣೆ’ ಅಂಗವಾಗಿ ಪಶು ವೈದ್ಯರಿಗೆ ಏರ್ಪಡಿಸಿದ್ದ ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಚಿಕಿತ್ಸೆಗೆ ಅಷ್ಟೇ ಸೀಮಿತವಾಗಿದ್ದ ಪಶುಸಂಗೋಪನಾ ಹಾಗೂ ಪಶುವೈದ್ಯಕೀಯ ಇಲಾಖೆ ಕ್ರಮೇಣವಾಗಿ ವಿಸ್ತರಣಾ ಚಟುವಟಿಕೆಗಳು ಆರಂಭವಾದವು. ಜೊತೆಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಯಿತು. ಗುಣಮಟ್ಟದ ಹಾಲು ಮತ್ತು ಮಾಂಸ ರಫ್ತಿಗೆ ಕೂಡ ಗಮನಹರಿಸಲಾಗಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆ ಆಗಲಿದೆ ಎಂದರು.

ರೈತರಿಗೆ ಅಗತ್ಯ ಮಾಹಿತಿಗಳ ಬಗ್ಗೆ ಮಾರ್ಗದರ್ಶನ ನೀಡುವ  ಪಶುಸಂಗೋಪನೆ ಯನ್ನು ಸದೃಢಗೊಳಿಸಬೇಕಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂದರು.

ಬೆಂಗಳೂರಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಪರ ನಿರ್ದೇಶಕ (ವಿಸ್ತರಣೆ, ತರಬೇತಿ ಶಿಕ್ಷಣ ಮತ್ತು ಆರ್‌ಕೆವಿವೈ) ಡಾ. ಹೆಚ್.ಎಸ್. ಜಯಣ್ಣ ಮಾ ತನಾಡಿ, ವೃತ್ತಿ ಘನತೆ ಮತ್ತು ವೃತ್ತಿ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ವಿಶ್ವ ಪಶುವೈದ್ಯಕೀಯ ದಿನಾಚರಣೆ ಮೂಲಕ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಪಶುವೈದ್ಯರಾಗಿ ಕೇವಲ ಇಲಾಖೆ ಸೇವಾ ಕಾರ್ಯಗಳನ್ನು ಮಾಡುವುದಲ್ಲದೇ, ಬೇರೆ ಬೇರೆ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಯಶಸ್ವಿ ಅಧಿಕಾರಿಗಳೆಂಬ ಹೆಗ್ಗಳಿಕೆಗೂ ಪಾತ್ರರಾಗಿರುವುದನ್ನು ನೋಡುತ್ತಿದ್ದೇವೆ. ಪಶುವೈದ್ಯರಿಗೆ ತಮ್ಮ ವೃತ್ತಿ ಬಗ್ಗೆ ಕೀಳರಿಮೆ ಬೇಡ ಎಂದು ಸಲಹೆ ನೀಡಿದರು.

ಪಶುವೈದ್ಯಕೀಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚನ್ನಗಿರಿ ವಲಯ ಡಿವೈಎಸ್ಪಿ ಡಾ. ಕೆ.ಎಂ. ಸಂತೋಷ್, ದಾವಣಗೆರೆ ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್‌, ಚನ್ನಗಿರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್ -1) ಡಾ. ಜಿ. ಮಲ್ಲಿಕಾರ್ಜುನ್, ಭದ್ರಾವತಿ ಎಪಿಎಂಸಿ ಸಹಾಯಕ ನಿರ್ದೇಶಕ ಡಾ.ಡಿ.ಬಿ. ಆದರ್ಶ್ ಇವರು ಸನ್ಮಾನ ಸ್ವೀಕರಿಸಿ, ತಮ್ಮ ಅನುಭವ ಹಂಚಿಕೊಂಡರು. 

ದಾವಣಗೆರೆ ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಎಸ್. ಸುಂಕದ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಾವಣಗೆರೆ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ಟಿ.ಆರ್. ವೀರೇಶ್, ಪ್ರಾಣಿ ದಯಾ ಸಂಘದ ಕುಲಕರ್ಣಿ, ಡಾ. ಚಿದಾನಂದ್, ಡಾ. ವಿಶ್ವನಾಥ್, ಡಾ. ನಾಗರಾಜ್, ಡಾ. ಗುರುಶಾಂತಪ್ಪ, ಡಾ. ಸಂತೋಷ್, ಡಾ. ಕೆ. ಅನಿಲ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!