ಎಐಡಿಎಸ್ಓ ಖಂಡನೆ
ದಾವಣಗೆರೆ, ಜೂ.6- ಪಠ್ಯಕ್ರಮದಲ್ಲಿ ಪ್ರಜಾ ತಾಂತ್ರಿಕ ಆಶಯವುಳ್ಳ, ವೈಜ್ಞಾನಿಕ ಚಿಂತನೆಗೆ ಪೂರಕ ವಾದ ಪಾಠಗಳನ್ನು ತೆಗೆದುಹಾಕಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಐಡಿಎಸ್ಓ ಖಂಡಿಸಿದೆ.
ಸಮಿತಿ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪತ್ರಿಕಾ ಹೇಳಿಕೆ ನೀಡಿ, 10ನೇ ತರಗತಿಯ ಪಠ್ಯಕ್ರಮ ದಿಂದ ಆವರ್ತಕ ಕೋಷ್ಟಕವನ್ನು ತೆಗೆದು ಹಾಕಲಾಗಿದ್ದು, ಇದರಡಿ ಬರುವ ಪರಿಸರ ಸುಸ್ಥಿರತೆ, ಇಂಧನ ಮೂಲಗಳು ಹಾಗೂ ರಾಜ್ಯ ಶಾಸ್ತ್ರ ಪಠ್ಯ ಪುಸ್ತಕದಿಂದ ಪ್ರಜಾಪ್ರಭುತ್ವ ರಾಜಕೀಯ-1ರಡಿ ಮಹತ್ವದ ಸಂಘರ್ಷಗಳು ಮತ್ತು ಚಳುವಳಿಗಳು, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳನ್ನೂ ಕೈಬಿಡಲಾಗಿದೆ. ಇದು ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣದ ಮೇಲಿನ ದಾಳಿಯಾಗಿದೆ ಎಂದಿದ್ದಾರೆ.
ಸರ್ಕಾರವು ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಪಾಠಗಳನ್ನು ಕೈಬಿಡುತ್ತಿರುವುದನ್ನು ದೇಶದ ಜನರು ಈಗಾಗಲೇ ಖಂಡಿಸಿದ್ದಾರೆ. ಈ ಹಿಂದೆ ವಿಕಾಸವಾದ ಸಿದ್ಧಾಂತದ ಪಾಠವನ್ನು ಸಹ ಕೈಬಿಡಲಾಗಿತ್ತು. ವಿದ್ಯಾರ್ಥಿ ಗಳ ಶೈಕ್ಷಣಿಕ ಹೊರೆ ಕಡಿಮೆಗೊಳಿಸುವ ಹೆಸರಿನಲ್ಲಿ, ಕೇಂದ್ರ ಸರ್ಕಾರದ ಬೆಂಬಲಿತ ಎನ್ಸಿಇಆರ್ಟಿ ಯು ವಿದ್ಯಾರ್ಥಿ ಸಮೂಹದ ಜ್ಞಾನಾರ್ಜನೆಯ ಮೇಲೆ ಎಲ್ಲಾ ರೀತಿಯ ದಾಳಿ ಮಾಡುತ್ತಿದೆ ಹಾಗೂ ತನ್ನ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ.
ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಆವರ್ತಕ ಕೋಷ್ಟಕ ಸೇರಿದಂತೆ, ಈಗ ಕೈಬಿಡಲಾದ ಪಾಠಗಳು ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಅನುಕೂಲಕರವಾಗಿದ್ದವು ಮತ್ತು ಅವರು ಓದುವ ಸಂಪೂರ್ಣ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವಂತಿತ್ತು. ಆದರೆ ಈ ಪ್ರಕ್ರಿಯೆಯನ್ನು ನಾಶಗೊಳಿಸಲಾಗುತ್ತಿದೆ ಎಂದಿದ್ದಾರೆ.
ನವೋದಯ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ ವೈಜ್ಞಾನಿಕ – ಧರ್ಮ ನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣವನ್ನು ರಕ್ಷಿಸಲು ಎಲ್ಲಾ ಶಿಕ್ಷಣ ಪ್ರೇಮಿಗಳು ಮುಂದಾಗಬೇಕೆಂದು ಎಐಡಿಎಸ್ಒ ಕರೆ ನೀಡುತ್ತದೆ ಎಂದು ಸಮಿತಿ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.