20 ಸಾವಿರ ಮತಗಳ ಅಂತರದಿಂದ ಗೆಲ್ಲುವೆ

20 ಸಾವಿರ ಮತಗಳ ಅಂತರದಿಂದ ಗೆಲ್ಲುವೆ

ಬೂದಿಹಾಳ್‌ನಲ್ಲಿ ಮತ ಚಲಾಯಿಸಿದ ನಂತರ ಬಿ.ಪಿ. ಹರೀಶ್ ಹೇಳಿಕೆ

ಮಲೇಬೆನ್ನೂರು, ಮೇ 10- ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಬಿ.ಪಿ. ಹರೀಶ್ ಅವರು ತಮ್ಮ ಸ್ವಗ್ರಾಮ ಬೂದಿಹಾಳ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಶ್ರೀಮತಿ ಅನುರಾಧ, ಪುತ್ರಿ ಶ್ರೀಮತಿ ಅನುಷಾ ಅವರೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಈ ವೇಳೆ `ಜನತಾವಾಣಿ’ಯೊಂದಿಗೆ ಮಾತನಾಡಿದ ಹರೀಶ್ ಅವರು, ಹರಿಹರ ಕ್ಷೇತ್ರದಲ್ಲಿ ಹಿಂದೆಂದೂ ಸಿಗದಂತಹ ಬೆಂಬಲ ಈ ಬಾರಿ ನನಗೆ ಸಿಕ್ಕಿದೆ. ನಾನು ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಇಂದಿಗೂ ಹಚ್ಚ ಹಸಿರಾಗಿವೆ. ನನ್ನ ನಂತರ ಶಾಸಕರಾದ ಇಬ್ಬರ ಅವಧಿಯಲ್ಲೂ ಅಂತಹ ಹೇಳಿಕೊಳ್ಳುವಂತಹ ಕಾಮಗಾರಿಗಳು ಆಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಕ್ಷೇತ್ರದ ಜನ ಈ ಬಾರಿ ನನ್ನನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. 

ಈ ಹಿನ್ನೆಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜನ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂದು ಹರೀಶ್ ಹೇಳಿದರು.

ಗ್ರಾ.ಪಂ. ಸದಸ್ಯ ಶಿವರಾಜ್, ಟಿವಿ ಅಂಗಡಿ ಅಶೋಕ್, ಹಳೇಮನೆ ಅಜ್ಜಪ್ಪ, ಆರ್. ರಾಜು ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!