ಮಾನ್ಯರೇ,
ತಮ್ಮ ಜೀವರಕ್ಷಣೆಗಾಗಿ ಐಎಸ್ಐ ಮಾರ್ಕ್ ಹೊಂದಿರುವ ಫುಲ್ ಹೆಲ್ಮೆಟ್ ಧರಿಸಲು ವಾಹನ ಸವಾರರಿಗೆ ಕಡ್ಡಾಯದ ಎಚ್ಚರಿಕೆ ನೀಡಿರುವ ಎಸ್ಪಿ ಉಮಾ ಪ್ರಶಾಂತ್ ಅವರ ಆದೇಶ ಒಂದೆಡೆಯಾದರೆ, ಬಿಸಿಲಿನ ತಾಪದಿಂದ ತತ್ತರಿಸಿರುವ ನಗರದ ಜನತೆ ಹೆಲ್ಮೆಟ್ ಹಾಫ್ ಧರಿಸಬೇಕೋ ಅಥವಾ ಫುಲ್ ಹಾಕಿಕೊಳ್ಳಬೇಕೋ ಎಂಬ ಟೆನ್ಷನ್‌ನಲ್ಲಿ ಈಗ ಪರಿಹಾರ ಹುಡುಕಲು ಪ್ರಾರಂಭಿಸಿದ್ದಾರೆ.
ಕಳೆದ ಒಂದು ವಾರದಿಂದ ನಡೆದ ಪೊಲೀಸ್ ಇಲಾಖೆಯ ಜಾಗೃತಿ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದ ಎಸ್ಪಿ ಮೇಡಂ, ಇಂದಿನಿಂದ ದಂಡ ವಿಧಿಸಲು ಇಲಾಖೆಗೆ ಸೂಚಿಸಿದ್ದು, ವಾಹನ ಸವಾರರಿಗೆ ಇದು ಬಿಸಿಲಿನ ತಾಪಕ್ಕಿಂತ ಹೆಚ್ಚು ಶಾಖ ನೀಡಿದಂತಾಗಿದೆ.
ಪ್ರಸ್ತುತ ದಾವಣಗೆರೆ ನಗರದಲ್ಲಿ ಶೇ.38ರಷ್ಟು ಬಿಸಿಲಿನ ತಾಪ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಫುಲ್ ಹೆಲ್ಮೆಟ್ ಧರಿಸಿ ವಾಹನ ನಡೆಸುವುದು ಬಹಳ ಕಷ್ಟ. ಇನ್ನು ಕೆಲವು ದಿನ ರಿಯಾಯಿತಿ ನೀಡಿ ನಂತರದ ದಿನಗಳಲ್ಲಿ ಈ ಕಾನೂನು ಜಾರಿಗೊಳಿಸಲಿ ಎಂಬುದು ಅನೇಕ ವಾಹನ ಸವಾರರ ಅಭಿಪ್ರಾಯವಾಗಿದೆ.
ಅಷ್ಟೇ ಅಲ್ಲದೆ ಈ ಸಂಬಂಧ ಸಾರ್ವಜನಿಕರು, ವಾಹನ ಸವಾರರು ಒಳಗೊಂಡಂತೆ ಬುದ್ಧಿಜೀವಿಗಳು ಮೊನ್ನೆ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಫುಲ್ ಹೆಲ್ಮೆಟ್ ಧರಿಸುವುದಕ್ಕೆ ಇನ್ನೂ ಕೆಲವು ದಿನ ರಿಯಾಯಿತಿ ನೀಡಿದರೆ ಸೂಕ್ತ ಎಂಬ ಅಂಶ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬಂದಿತ್ತಾದರೂ. ಇದನ್ನೂ ಲೆಕ್ಕಿಸದೆ ಇಂದಿನಿಂದ ಫುಲ್ ಹೆಲ್ಮೆಟ್ ಕಡ್ಡಾಯ ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂಬ ಇಲಾಖೆಯ ಆದೇಶ ವಾಹನ ಸವಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಿಮಿಸಿದೆ.
ಇಂಡಿಕೇಟರ್- ಮಿರರ್‌ಗೆ ಪ್ರಾಮುಖ್ಯತೆ ನೀಡಿ..!:
ದಿನದಿಂದ ದಿನಕ್ಕೆ ನಮ್ಮ ನಗರ ಅಭಿವೃದ್ಧಿ ಹೊಂದುತ್ತಲೇ ಹೊರಟಿದೆ. ಜನಸಂಖ್ಯೆ ಬೆಳೆಯುತ್ತಲೇ ಇದೆ, ರಸ್ತೆಗಳು ಕಿಷ್ಕಿಂಧೆಯಂತಿವೆ. ಪಾದಚಾರಿಗಳು ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಫುಲ್ ಹೆಲ್ಮೆಟ್ ಆದೇಶ ನೀಡಿರುವುದು ಸಮಂಜಸ ಅಲ್ಲ ಎಂದು ದೂರಿರುವ ವಾಹನ ಸವಾರ ಬಸವರಾಜ್, ಪೊಲೀಸ್ ಇಲಾಖೆ ಮೊದಲು ದ್ವಿಚಕ್ರ ವಾಹನ ಸವಾರರಿಗೆ ಸೈಡ್ ಮಿರರ್, ಇಂಡಿಕೇಟರ್‌ಗಳನ್ನು ಹಾಕಿ ಸಂಚಾರ ನಿಯಮ ಪಾಲಿಸಲು ಜಾಗೃತಿ ಮೂಡಿಸಿ, ಅಡ್ಡಾ – ದಿಡ್ಡಿ ಸಂಚಾರವನ್ನು ಕಂಟ್ರೋಲ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಬಿಸಿಲಿನ ತಾಪ ಆರೋಗ್ಯಕ್ಕೆ ದುಷ್ಪಾರಿಣಾಮ : ಈಗ ಹಾಲಿ ಬಿಸಿಲಿನ ತಾಪದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇಂತಹ ಸಮಯದಲ್ಲಿ ಫುಲ್ ಹೆಲ್ಮೆಟ್ ಧರಿಸುವುದರಿಂದ ಇನ್ನೂ ಹೆಚ್ಚಿನ ದುಷ್ಪರಿಣಾ ಮಗಳನ್ನು ಬೀರುವ ಸಂಭವ ಹೆಚ್ಚಾಗಬಹುದು, ನಮ್ಮಗಳ ಜೀವರಕ್ಷಣೆಗೆ ಪೊಲೀಸ್ ಇಲಾಖೆಯ ಆದೇಶ ಓ.ಕೆ., ಆದರೆ ಈಗ ಬೇಡ ಮುಂದಿನ ದಿನಗಳಲ್ಲಿ ಬೇಸಿಗೆಯ ನಂತರ ಈ ಆದೇಶವನ್ನು ಪಾಲಿಸಲು ನಾವೆಲ್ಲರೂ ಸನ್ನದ್ಧರಾಗೋಣ ಎಂಬ ಅನಿಸಿಕೆಯನ್ನು ಪ್ರಸ್ತಾಪಿ ಸಿರುವ ವಾಹನ ಸವಾರ ಶಬ್ಬೀರ್ ಆಹ್ಮದ್, ಪ್ರಸ್ತುತ ರಂಜಾನ್ ತಿಂಗಳು ಉಪವಾಸ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ತಲ್ಲೀನ ರಾಗಿರುತ್ತಾರೆ. ಫುಲ್ ಹೆಲ್ಮೆಟ್ ಧರಿಸಲು ಇನ್ನೂ ಕೆಲವು ದಿನ ರಿಯಾಯಿತಿ ನೀಡಿದರೆ ಸೂಕ್ತ ಎಂದರು.
ಮೊನ್ನೆ ನಡೆದ ಸಭೆಯಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಯಲ್ಲಪ್ಪ, ತಮ್ಮ ಅಭಿಪ್ರಾಯ ಮಂಡಿಸಿ ಫುಲ್ ಹೆಲ್ಮೆಟ್ ಧರಿಸುವುದರಿಂದ ತಲೆಯಲ್ಲಿರುವ ಕೊದಲುಗಳು ಉದುರುತ್ತವೆ. ಹುಡುಗಿಯರು ಮದುವೆ ಮಾಡಿಕೊಳ್ಳಲು ಒಪ್ಪುವುದಿಲ್ಲ ಎಂಬ ಹಾಸ್ಯ ಚಟಾಕಿಯ ನುಡಿ, ನಿಜಕ್ಕೂ ನಡೆದಿರುವ ಪ್ರಸಂಗಗಳು ಜೀವಂತ ಉದಾಹರಣೆಗಳಿವೆ ಎಂದರು.
ಒಟ್ಟಾಗಿ, ಏನೇ ಆಗಲಿ ಎಸ್ಪಿ ಉಮಾ ಪ್ರಶಾಂತ್ ಅವರ ಆದೇಶವನ್ನು ಪಾಲಿಸಲು ನಗರದ ವಾಹನ ಸವಾರರು ತಯಾರಿದ್ದಾರೆ, ಆದರೆ ಈ ಆದೇಶಕ್ಕೆ ಕೊಂಚ ದಿನ ‘ಬ್ರೇಕ್ ‘ಹಾಕಿ ಮುಂದಿನ ದಿನಗಳಲ್ಲಿ ಅಂದರೆ ಬೇಸಿಗೆಯ ನಂತರ ಫುಲ್ ಹೆಲ್ಮೆಟ್ ಧರಿಸಲು ಸೂಚಿಸಿದರೆ ಸೂಕ್ತ ಎಂಬ ಅಭಿಪ್ರಾಯ ಅನೇಕ ವಾಹನ ಸವಾರರಲ್ಲಿ ಮೂಡಿ ಬಂದಿತ್ತು. ಆದರೆ ಎಸ್ಪಿ ಮೇಡಂ.. ಜೀ…ಇದಕ್ಕೆ ಸ್ಪಂದಿಸು ತ್ತಾರೋ. ಇಲ್ಲವೋ.. ಕಾದು ನೋಡಬೇಕಿದೆ.!
-ಬಿ. ಸಿಕಂದರ್, ದಾವಣಗೆರೆ.