ಮಾನ್ಯರೇ,
ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸುವ ಸವಾರರನ್ನು ತಡೆಹಿಡಿದು, ಪೂರ್ತಿ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್ ಪೊಲೀಸರು ಜನತೆಗೆ ತಿಳಿ ಹೇಳುತ್ತಿದ್ದಾರೆ. ಮೋಟಾರ್ ವಾಹನಗಳ ಕಾಯ್ದೆಯ ಕಲಂ 129ರಲ್ಲಿ ನಾಲ್ಕು ವರ್ಷದ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಮೋಟಾರು ಸೈಕಲನ್ನು ಸಾರ್ವಜನಿಕ ಸ್ಥಳಗಳಲ್ಲಿ ಚಲಾಯಿಸುವಾಗ ಅಥವಾ ಸಾಗುವಾಗ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಗುಣಮಟ್ಟದ ಶಿರಸ್ತ್ರಾಣವನ್ನು ಧರಿಸಬೇಕಾಗುತ್ತದೆ.
ಈ ಕಾನೂನಿನ ಅಂಶದಲ್ಲಿ ಗುಣಮಟ್ಟದ ಶಿರಸ್ತ್ರಾಣ ಎಂದು ತಿಳಿಸಿದೆ.ಇದರರ್ಥ ಹಾಫ್ ಹೆಲ್ಮೆಟ್ ಎಂಬ ಪರಿಕಲ್ಪನೆಯೇ ಇರುವುದಿಲ್ಲ. ಹೆಲ್ಮೆಟ್ ಧರಿಸದೇ ಚಲಾಯಿಸಿದ್ದಲ್ಲಿ ಇದೇ ಕಾನೂನಿನ ಕಲಂ 194 ಡಿ ಪ್ರಕಾರ ಒಂದು ಸಾವಿರ ರೂಪಾಯಿಗಳ ದಂಡ ಮತ್ತು ಮೂರು ತಿಂಗಳ ತನಕ ಲೈಸೆನ್ಸನ್ನು ತಡೆಹಿಡಿಯಬಹುದಾಗಿದೆ.
ಕಾನೂನನ್ನು ಬದಿಗಿಟ್ಟು ಚರ್ಚಿಸುವುದಾದರೆ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಒಳಿತಲ್ಲವೇ? ಹಾಫ್ ಹೆಲ್ಮೆಟ್ ಧರಿಸಿದಾಗ ಜೋರು ಗಾಳಿಬಂದರೆ ಅದು ಹಾರಿ ಹೋಗಿ ಹಿಂಬದಿಯಲ್ಲಿರುವ ಸವಾರರಿಗೂ ಉಪದ್ರವಾಗುತ್ತದೆ. ಈ ಬೇಸಿಗೆ ಕಳೆಯುವ ತನಕ ಪೂರ್ತಿ ಹೆಲ್ಮೆಟ್ ಧರಿಸದೇ ಇರುವ ಸವಾರರ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ಚರ್ಚೆಗಳು ಆಗುತ್ತಿವೆ. ಪೂರ್ತಿ ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಲ್ಲಿ ತಲೆಗೇನೂ ಪೆಟ್ಟಾಗಲಿಲ್ಲ ಎಂದು ಹೇಳಿದ್ದವರನ್ನು ಕಂಡಿದ್ದೇವೆ. ಹೀಗಿರುವಾಗ ಯಮ ಧರ್ಮನಿಗೆ ಬೇಸಿಗೆ, ಮಳೆ, ಚಳಿ ಎಂದು ಭೇದಭಾವ ಇದೆಯೇ? ಹೆಲ್ಮೆಟ್ ಬೇಡವೇ ಬೇಡ ಎನ್ನುವವರ ಅಭಿಪ್ರಾಯದ ಬದಲಿಗೆ, ಪೂರ್ತಿ ಹೆಲ್ಮೆಟ್ ಬಳಸುವ ರೂಢಿಯನ್ನು ಮಾಡಿಸಲೇಬೇಕಿದೆ ಹೊರತು, ಬೇಸಿಗೆ ಕಳೆಯಲಿ, ನಂತರದಲ್ಲಿ ನೋಡೋಣ ಎಂಬುದು ಅಸಂಬದ್ಧವೇ ಸರಿ.
– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.