ಮಾನ್ಯರೇ,
ಬೇಸಿಗೆಯ ತಾಪ ಪ್ರಜ್ವಲಿಸುವ ಈ ಸಮಯದಲ್ಲಿ ಅರ್ಧ ಹೆಲ್ಮೆಟ್ ನಿಷೇಧ ಎಷ್ಟು ಸರಿ? ಈ ಹಿಂದೆ ಜಿಲ್ಲೆಯಲ್ಲಿ ಬೇಸಿಗೆ ಸಮಯಕ್ಕೆ ಹೆಲ್ಮೆಟ್ ಕಡ್ಡಾಯ ರಿಯಾಯಿತಿ ನೀಡಿದ ಉದಾಹರಣೆ ಇದೆ. ಆದರೆ ಈ ಬಾರಿ ಅರ್ಧ ಹೆಲ್ಮೆಟ್ ನಿಷೇಧ ಸರಿಯೇ.
ದಯವಿಟ್ಟು ಬಿರು ಬಿಸಿಲ ಸಮಯದಲ್ಲಿ ಕನಿಷ್ಟ ಅರ್ಧ ಹೆಲ್ಮೆಟ್ ಕಡ್ಡಾಯ ಮಾಡಿ. ಆದರೆ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿದರೆ ಜನ ಸಾಮಾನ್ಯರಿಗೆ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು.
ಕಾರಣ ಜನ ಸಾಮಾನ್ಯರು ಈಗ ಐಎಸ್‌ಐ ಮಾರ್ಕಿನ ಹೆಲ್ಮೆಟ್ ಖರೀದಿ ಮಾಡಲು ಹೋದರೆ ಮಾರಾಟಗಾರರು ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಭಾರ ಮಾಡುತ್ತಾರೆ. ಅಲ್ಲದೆ ಬೇಡಿಕೆಗೆ ಅಭಾವ ಸೃಷ್ಟಿಸಿ ಜನರ ಸಮಯ, ಹಣ ಪೋಲಾಗುವಂತೆ ಮಾಡುತ್ತಾರೆ. ಕಾರಣ, ಸಾಮಾನ್ಯ ಜನರಿಗೆ ಅನುಕೂಲ ಮಾಡುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ.
ಪುಂಡರ ಹಾವಳಿ ಹೆಚ್ಚಾಗಿದೆ. ಕಾಲೇಜುಗಳಿರುವ ಸ್ಥಳಗಳಲ್ಲಿ ಅಪ್ರಾಪ್ತ ಮಕ್ಕಳ ಬೈಕ್ ಸವಾರಿ ಜೋರಾಗಿದೆ. ಮೂರು ಜನರು ಪ್ರಯಾಣಿಸುವುದು, ಅಡ್ಡಾದಿಡ್ಡಿ ರಸ್ತೆಯಲ್ಲಿ ಹೋಡಾಡುವುದು ಸೈಲನ್ಸರ್ ರಹಿತ ಪ್ರಯಾಣ, ಕರ್ಕಶ ಶಬ್ಧ, ಅತಿವೇಗ, ಎಲ್ಲದರ ಮೇಲೆ ನಿಯಂತ್ರಣ ತನ್ನಿ. ಕಾಲೇಜುಗಳ ಬಳಿ ನಿಂತಿರುವ ಎಲ್ಲಾ ಮಕ್ಕಳಿಗೆ ಮನವರಿಕೆ ಮಾಡುವ ಮೂಲಕ ಸಮಯಾವಕಾಶ ನೀಡಿ ನಂತರ ಪೋಷಕರಿಗೆ ದಂಡ ವಿಧಿಸುವ ಕಾರ್ಯ ನಡೆದರೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪೋಷಕರು ಮಕ್ಕಳಿಗೆ ವಾಹನ ನೀಡದಿರುವ ನಿರೀಕ್ಷೆ ಮಾಡಬಹುದು.
– ಮಾಗನೂರು ಮಂಜಪ್ಪ, ದಾವಣಗೆರೆ.