ಎಸ್ಪಿ ಅವರಿಗೊಂದು ಕಳಕಳಿಯ ಮನವಿ

ಎಸ್ಪಿ ಅವರಿಗೊಂದು ಕಳಕಳಿಯ ಮನವಿ

ಮಾನ್ಯರೇ,

ಐ.ಎಸ್.ಐ ಮಾರ್ಕ್ ಇಲ್ಲದ ಮತ್ತು ಅರ್ಧ ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿರುವ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವುದಾಗಿ ಎಸ್.ಪಿ. ಉಮಾ ಪ್ರಶಾಂತ್ ಅವರು ಎಚ್ಚರಿಸಿದ್ದಾರೆ. ಸ್ವಾಗತಾರ್ಹ. ದ್ವಿಚಕ್ರ ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮವೇನೋ ಸರಿ. ಆದರೆ ಹಿಂದೆಂದೂ ಕಂಡರಿಯದಂತಹ ದಾಖಲೆಯ ರಣಬಿಸಿಲಿನ ಕಾವು ದಿನೇ ದಿನೇ ಏರುತ್ತಿದ್ದು, ಬಿಸಿಲಿನ ತಾಪಕ್ಕೆ ಇಡೀ ಕರುನಾಡೇ ಕಾದ ಕಾವಲಿಯಂತಾಗಿದೆ. ಈಗಲೇ ಜನರು ಬಿಸಿಲಿನ ಹೊಡೆತಕ್ಕೆ ಬೇಸತ್ತಿದ್ದು, ಜನರು ಆಗಸದತ್ತ ಮುಖ ಮಾಡಿ ಯಾವಾಗಪ್ಪ ಮಳೆಗಾಲ ಶುರುವಾಗುತ್ತದೆ ಎಂದು ಹಪ ಹಪಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಕಾಯಿಲೆಗಳು, ಉಸಿರಾಟದ ತೊಂದರೆ, ನಿತ್ರಾಣ ಸಮಸ್ಯೆ, ಗಂಭೀರವಾದ ಕಾಯಿಲೆಗಳು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಹೆಚ್ಚು. ಇಂತಹ ಬೇಸಿಗೆ ಸಮಯದಲ್ಲಿ ಪೂರ್ಣ ಹೆಲ್ಮೆಟ್ ಧರಿಸುವುದು ಎಲ್ಲರಿಗೂ ತುಸು ತ್ರಾಸದಾಯಕವೇ, ಜೊತೆಗೆ ಅತಿ ಹೆಚ್ಚಿನ ಉಷ್ಣತೆಯಿಂದ ತಲೆಯ ಕೂದಲುಗಳು ಉದುರಲು ಪ್ರಾರಂಭವಾಗುತ್ತವೆ. ಬೇಸಿಗೆ ಪ್ರಾರಂಭವಾಯಿತೆಂದರೆ ಬಹುತೇಕ ಮಂದಿಗೆ ಉಷ್ಣಾಂಶ ಹೆಚ್ಚಳದಿಂದ ಕೂದಲು ಉದುರುವ ಸಮಸ್ಯೆ ಪ್ರಾರಂಭವಾಗುತ್ತದೆ. ತಲೆಗೂದಲೇ ಮನುಷ್ಯನ ಅಂದವನ್ನು ಹೆಚ್ಚಿಸುವ ಒಂದು ಭಾಗ. ಅಂತದ್ದರಲ್ಲಿ ತಲೆಗೂದಲೇ ಇಲ್ಲದಿದ್ದರೆ ಹೇಗೆ? ಇನ್ನೂ ಅವಿವಾಹಿತರಾದರೆ ಕ್ರಮೇಣ ತಲೆಗೂದಲು ಉದುರು ತ್ತಿದ್ದರೆ ಸಂಪೂರ್ಣವಾಗಿ ಬೋಳು ತಲೆಯಾಗಿ, ಭವಿಷ್ಯದಲ್ಲಿ ಹೆಣ್ಣು ಸಿಗುವುದೇ ಕಷ್ಟವಾಗುತ್ತದೆ. ಈಗಿನ ಕಾಲದಲ್ಲಿ ಆಸ್ತಿ ಪಾಸ್ತಿ ಎಲ್ಲಾ ಇದ್ದು ಹೆಣ್ಣು ಕೊಡುವುದೇ ಕಷ್ಟ. ಇನ್ನು ತಲೆಗೂದಲಿಲ್ಲವೆಂದರೆ ಎಲ್ಲೂ ಹೆಣ್ಣು ಸಿಗದೇ ಜೀವನ ಪರ್ಯಂತ ಬ್ರಹ್ಮಚಾರಿಯಾಗ ಬೇಕಾಗುತ್ತದೆ. ಸರ್ಕಾರದ ನಿಯಮಗಳೇನೋ  ಸರಿ. ಆದರೆ ಇಲ್ಲಿ ಮಾನವೀಯ ದೃಷ್ಟಿಯಿಂದ  ಜನರ ಹಿತಾಸಕ್ತಿಯನ್ನು ನೋಡಬೇಕಾಗುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಉಮಾ ಪ್ರಶಾಂತ್ ಅವರು ವಿಶೇಷವಾಗಿ ಗಮನ ಹರಿಸಿ, ಬೇಸಿಗೆ ಕಾಲದ ಕನಿಷ್ಠ ಮೂರ್ನಾಲ್ಕು ತಿಂಗಳುಗಳ ಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನಿಂದ ವಿನಾಯಿತಿ ನೀಡಬೇಕಾಗಿ ತಮ್ಮಲ್ಲಿ ಕಳ ಕಳಿಯ ವಿನಂತಿ.

ಡಿ. ಮುರುಗೇಶ್‌, ದಾವಣಗೆರೆ

error: Content is protected !!