ದ್ವಂದ್ವ ಬಿಟ್ಟು ದಾರ್ಶನಿಕರ ದೃಷ್ಟಿ ಅನುಸರಿಸೋಣ

ಮಾನ್ಯರೇ,

ಅವರವರ ಧಾರ್ಮಿಕ ಆಚರಣೆ ಮತ್ತು ನಂಬಿಕೆ ಅವರಿಗೆ ಸಂಬಂಧಿಸಿದವು ಇವುಗಳನ್ನು ನಿಂದಿಸುವುದು ಸರಿಯಲ್ಲ ಎನ್ನುತ್ತಾ ಸುಮ್ಮನಾದರೆ ಜನರಲ್ಲಿ ಬರೀ ಮೌಢ್ಯಗಳೇ ಬೆಳೆಯುತ್ತವೆ. ಜನರು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಮಾನವೀಯತೆಯಿಂದ ಯೋಚಿಸುವುದನ್ನೇ ಮರೆಯುತ್ತಾರೆ. ಈ ರೀತಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ದ್ವಂದ್ವ ನಿಲುವುಗಳನ್ನು ಬಹುತೇಕರು ಮಾಡುತ್ತಾರೆ. ಬುದ್ಧ, ಬಸವ, ಗಾಂಧಿ ಇತ್ಯಾದಿ ಜಗತ್ತಿನ ದಾರ್ಶನಿಕರು ಜಗತ್ತಿನ ಮೌಢ್ಯಗಳನ್ನು ಖಂಡಿಸಲು ಕಾರಣ ಅವರಲ್ಲಿದ್ದ ಜನಪರ, ಜೀವಪರ ನಿಲುವುಗಳು. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ, ರೋಗ, ಸಾಲ ನಿವಾರಣೆಯಾಗಿ ನಮ್ಮ ಆಸೆಗಳೆಲ್ಲಾ ನೆರವೇರುತ್ತವೆ ಎನ್ನುವುದು ಭ್ರಮೆ. ಮೌಢ್ಯಾಚರಣೆಗಳಿಂದ ಜನದಟ್ಟಣೆ,  ಸಾವು, ಸಾಲ, ನೋವು, ವೃಥಾ ಖರ್ಚು ಹೆಚ್ಚಾಗುತ್ತವೆ.

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎನ್ನುವುದು ಎಷ್ಟು ಸತ್ಯವೋ, ಹಾಗೆಯೇ ಪರ್ಜನ್ಯ, ಜಪ, ಕುಂಭಮೇಳದ ಸ್ನಾನದಿಂದ ಬಡತನ, ಕಷ್ಟ ನಿರ್ಮೂಲನೆಯಾಗುವುದಿಲ್ಲವೆಂಬುದು ಅಷ್ಟೇ ಸತ್ಯ. ಕಾರ್ಯಕಾರಣ ಸಂಬಂಧವಿಲ್ಲದ, ಅವೈಜ್ಞಾನಿಕ ಮೌಢ್ಯಗಳಿಂದ ತುಂಬಿರುವ ಈ ಆಚರಣೆಗಳು `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗುತ್ತವೆ’.

 ಕಾಂಗ್ರೆಸ್‌ನಲ್ಲಿ ಅನಿಬೆಸೆಂಟ್, ಗೋಖಲೆ, ಮಹಾತ್ಮ ಗಾಂಧೀಜಿ ತವರು ವೈಚಾರಿಕ, ಮಾನವೀಯತೆಯ ನಿಲುವನ್ನು ಹೊಂದಿದ್ದ ನಾಯಕರಾಗಿದ್ದು ಈಗಿನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಕುಂಭಮೇಳದ ಸ್ನಾನದಿಂದ ಬಡತನ ನಿವಾರಣೆಯಾಗುವುದಿಲ್ಲ ಎಂಬ ನಿಲುವು ಸರಿಯಾಗಿದೆ. ದ್ವಂದ್ವವೆಂದರೆ ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಕುಂಭಮೇಳದಲ್ಲಿ ಸ್ನಾನ ಮಾಡಿಬಂದಿ ರುವುದು ಕಾಂಗ್ರೆಸಿನ ವೈಚಾರಿಕತೆಗೆ ಅವಮಾನ. `ಮೂರ್ಖರು ನಡೆದ ದಾರಿಯಲ್ಲಿ ವಿದ್ಯಾವಂತ ಜಾಣರು ಹೆಜ್ಜೆ ಇಡಬಾರದು’. ಜನರಲ್ಲಿ ಮೌಢ್ಯ ಬಿತ್ತದೆ ಅರಿವನ್ನುಂಟು ಮಾಡಬೇಕು. ಜನರಲ್ಲಿ ವೈಜ್ಞಾನಿಕತೆಯನ್ನು ಬೆಳೆಸಬೇಕೆನ್ನುವುದು ಸಂವಿ ಧಾನದ ಆಶಯ. ಸಂವಿಧಾನದ ಭಾಗ 4ಎ, ವಿಧಿ 51 ಎ (ಎಚ್) ರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಪ್ರತಿ ಭಾರತೀಯ ನಾಗರಿಕರ ಕರ್ತವ್ಯ ಎಂಬುದಾಗಿ ತಿಳಿಸಲಾಗಿದೆ. 

ಎಲ್ಲಾ ಜೀವಿಗಳ ಪೊರೆವ ಏಕೈಕ ಧರ್ಮ ಪ್ರಕೃತಿ ಧರ್ಮ. ಉಪನಿಷತ್, ವಚನಕಾರರು ಪ್ರೀತಿ, ಕರುಣೆಗಳಿಂದ ಬೋಧಿಸಿದ ನಿಸರ್ಗ ವಿವೇಕವನ್ನು ಯುವಕರಲ್ಲಿ, ಮಕ್ಕಳಲ್ಲಿ ಬರುವಂತೆ ಆಚರಿಸಿ ಅರಿವು ಮೂಡಿಸೋಣ.

– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

error: Content is protected !!