ಮಾನ್ಯರೇ,
ಈಚೆಗೆ ಜಗಳೂರಿನಲ್ಲಿ ನೆರವೇರಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ನೋಡಿದೆ, ಕೇಳಿದೆ, ಚೆನ್ನಾಗಿ ನೆರವೇರಿತು. ಆದರೆ, ಇದಕ್ಕೆಲ್ಲಾ ಕಪ್ಪು ಚುಕ್ಕೆಯಂತೆ ಇತ್ತು ಸಂಜೆ ನೆರವೇರಿದ ಹಾಸ್ಯ ಕಾರ್ಯಕ್ರಮ.
ಅತ್ಯಂತ ಕಳಪೆ ಗುಣಮಟ್ಟದ ಹಾಸ್ಯ ಪ್ರಸ್ತುತಿ ಮಾಡಿದ ಮೂವರು ಒಂದಷ್ಟು ಸಮಯವನ್ನು ಅಲ್ಲಿನ ಶಾಸಕರನ್ನು ಮನಸೋ ಇಚ್ಛೆ ಹೊಗಳುವುದಕ್ಕೆ ಬಳಸಿಕೊಂಡರೆ ಉಳಿದ ಸಮಯವನ್ನೆಲ್ಲಾ ದ್ವಂದ್ವಾರ್ಥದ ಅಪ್ರಬುದ್ಧ ಅಸಂಬದ್ಧ ಹಾಸ್ಯಕ್ಕಾಗಿ, ಹಾಸ್ಯ ಎನ್ನುವುದಕ್ಕಿಂತ ಅಪಹಾಸ್ಯಕ್ಕಾಗಿ ಎನ್ನಬಹುದು ಬಳಸಿಕೊಂಡರು.
ಎಲ್ಲಿಯವರೆಗೆ ಎಂದರೆ ಯಾವುದೋ ಒಂದು ಚಲನಚಿತ್ರದ ಗೀತೆಯ ದಾಟಿಯನ್ನು ತೆಗೆದುಕೊಂಡು `ನಮ್ಮಮ್ಮಗೂ ಎದುರು ಮನೆ ಆಂಟಿಗೂ ಒಂದೇ ಅನುಮಾನ, ನಮ್ಮಪ್ಪ ಯಾರಿಗೆ ಯಜಮಾನ??’ ಎಂದೂ ಹೇಳಿಯೇ ಅರ್ಥಾತ್ ಹಾಡಿಯೇ ಬಿಟ್ಟರು!!. ಇದೂ ಒಂದು ಹಾಸ್ಯವೇ? ಅದೂ ಸಹಾ ಮಕ್ಕಳು, ದೊಡ್ಡವರು, ಹೆಂಗಸರು ಸೇರಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಕಾರ್ಯಕ್ರಮದಂತಹ ವೇದಿಕೆಯಲ್ಲಿ!.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳ ಗಂಭೀರವಾದ ವಿಚಾರಗೋಷ್ಠಿ, ಸ್ವಾರಸ್ಯವಾದ ಕವಿಗೋಷ್ಠಿ ಮುಂತಾದವುಕ್ಕೆ ಕೇಳುಗರು, ನೋಡುಗರು ಇರುವುದಿಲ್ಲ. ಆದರೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ಜನಸಾಗರವೇ ಸೇರುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಕೀಳು ಮಟ್ಟದ ಹಾಸ್ಯ ಮುಂತಾದ ಕಾರ್ಯಕ್ರಮ ಕೊಟ್ಟರೆ ನೆರೆದವರು `ಕನ್ನಡ ಸಾಹಿತ್ಯವೇ ಇಷ್ಟು’ ಎಂದು ತೀರ್ಮಾನಕ್ಕೆ ಬರುವ ಅಪಾಯವೂ ಇರುತ್ತದೆ.
ಮುಂದಾದರೂ ಯಾವುದೇ ಸಾಹಿತ್ಯ ಸಮ್ಮೇಳನವಾಗಲೀ, ಕನ್ನಡ ಸಮ್ಮೇಳನವಾಗಲೀ, ಉತ್ಸವಗಳಾಗಲೀ, ಕಾರ್ಯಕ್ರಮವಾಗಲೀ ಹಾಸ್ಯ ಪ್ರಸ್ತುತಿಗಾರರನ್ನು ಕರೆಸುವ ಮೊದಲು ಗುಣಮಟ್ಟದ ಬಗ್ಗೆ ಆಲೋಚಿಸಲೇಬೇಕು. ಜನರಂಜನೆಯ ನೆಪದಲ್ಲಿ ಸಾಹಿತ್ಯ ಸಮ್ಮೇಳನಗಳ ಘನತೆಗೆ ಕುಂದು ಬರಬಾರದು.
– ಡಾ. ಎಚ್. ಬಿ. ಮಂಜುನಾಥ, ಹಿರಿಯ ಪತ್ರಕರ್ತರು