ಮಾನ್ಯರೇ,
ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ವಿವಿಧ ಖಾಲಿ ಹುದ್ದೆಗಳಿಗೆ ಭರ್ತಿ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು ಇತ್ತೀಚೆಗೆ ಲೋಪ ದೋಷಗಳಿಂದ ಕೂಡಿರುವುದು ಅತ್ಯಂತ ಬೇಸರದ ಸಂಗತಿ.
ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲೇ ಬೇಕು ಎಂದು ಬಹು ವರ್ಷಗಳಿಂದ ಕಠಿಣ ವಿದ್ಯಾಭ್ಯಾಸ ಮಾಡಿ ಪರೀಕ್ಷೆಗಳನ್ನು ಎದುರಿಸುವ ವಿವಿಧ ಹುದ್ದೆಗಳ ಉದ್ಯೋಗಾಕಾಂಕ್ಷಿಗಳನ್ನು ಇಂದು ಗೊಂದಲಪೂರಿತ ಪ್ರಶ್ನೆಗಳು ಹಾಗೂ ಭಾಷಾಂತರದ ದೋಷಗಳು ವಿಚಲಿತರನ್ನಾಗುವಂತೆ ಮಾಡಿವೆ.
ಉದ್ಯೋಗದ ಕನಸಿನ ಬೆನ್ನೇರಿ ನಾಡಿನ ಲಕ್ಷಾಂತರ ನಿರುದ್ಯೋಗಿಗಳು ಬರೆಯುವ ಪರೀಕ್ಷೆಗಳು ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿರಬೇಕಾಗುತ್ತದೆ. ಆದರೆ ವಿವಿಧ ಆಯಾಮಗಳ ಮೂಲಕ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡುವ ಸಾಂವಿಧಾನಿಕ ಅಧಿಕಾರ ಹೊಂದಿರುವ ಲೋಕಸೇವಾ ಆಯೋಗದ ಇತ್ತೀಚಿನ ಕಾರ್ಯವೈಖರಿಗಳು ಉದ್ಯೋಗಾಕಾಂಕ್ಷಿಗಳ ಮತ್ತು ಸಾರ್ವಜನಿಕವಾಗಿ ಟೀಕೆಗಳಿಗೆ ಗುರಿಯಾಗುತ್ತಿರುವುದು ಅತ್ಯಂತ ವಿಷಾದದ ಸಂಗತಿ.
ಈಗಲಾದರೂ ಕರ್ನಾಟಕ ಲೋಕಸೇವಾ ಆಯೋಗವು ತನ್ನ ತಪ್ಪುಗಳನ್ನು ಸರಿಮಾಡಿಕೊಳ್ಳುವುದರ ಜೊತೆಗೆ ಲೋಪಸೇವಾ ಆಯೋಗ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ದೃಷ್ಟಿಯಲ್ಲಿ ವಿಶ್ವಾಸ ಗಳಿಸಿಕೊಳ್ಳಬೇಕಾಗಿದೆ.
– ಎಲ್.ಜಿ. ಮಧುಕುಮಾರ್, ಅಧ್ಯಕ್ಷರು,
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಚನ್ನಗಿರಿ.