ಮಾನ್ಯರೇ,
ದಾವಣಗೆರೆ – ಜೀವಕ್ಕೆ ಅಪಾಯ ಇದೆಯೆಂದು ಆಸ್ಪತ್ರೆಗೆ ಬರುವ ಜನತೆಗೆ ಈ ಆಸ್ಪತ್ರೆಗೆ ಬರುವವರ ಜೀವಕ್ಕೇ ಖಂಡಿತವಾಗಿ ಅಪಾಯ ಇದೆ!? ನಗರದ ಚಿಗಟೇರಿ ಆಸ್ಪತ್ರೆಯು ಬಡ ವರ್ಗದ ಜನತೆಗೆ ಬಲವೇ ಸರಿ. ಖಾಸಗೀ ಆಸ್ಪತ್ರೆಗಳ ದುಬಾರಿ ದರಗಳನ್ನು ಕಂಡೇ ಬಡವ ಸಾಯುತ್ತಾನೆ. ಹಾಗಾಗಿಯೇ ಬಡ ಜನತೆಗೆ, ದಾವಣಗೆರೆ ಜಿಲ್ಲಾ ಆಸ್ಪತ್ರೆ ಎಂದರೆ ಅಚ್ಚುಮೆಚ್ಚಾಗಿರುತ್ತದೆ. ಆದರೆ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರಿಗೆ ತೀವ್ರ ಪೆಟ್ಟಾಗಿರುವುದನ್ನು ಕಂಡಿದ್ದೇವೆ. ಈ ಕಟ್ಟಡದ ಹೆಚ್ಚಿನ ಭಾಗಗಳು ಶಿಥಿಲಗೊಂಡಿವೆ, ಅಲ್ಲಲ್ಲಿ ಕಾಣಸಿಗುವ ಗೋಡೆಯಲ್ಲಿ ಬಿರುಕುಗಳು, ಮೇಲ್ಛಾವಣಿ ಕುಸಿತಗಳು ನಿಜಕ್ಕೂ ರೋಗಿಗಳಿಗೆ, ರೋಗಿಗಳನ್ನು ಕಾಣಲು ಬರುವ ಮಂದಿಗೆ ಭಯ ಹುಟ್ಟಿಸುವಂತಿದೆ. ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಶೀಘ್ರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ, ಸರ್ಕಾರಕ್ಕೆ ಮನದಟ್ಟು ಮಾಡಬೇಕಾಗಿದೆ.
ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸರ್ಕಾರವು ಈ ಕೂಡಲೇ ಇತಿಹಾಸ ಹೊಂದಿರುವ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ದುರಸ್ತಿಗೊಳಿಸಿ, ಆಧುನೀಕರಣ ಗೊಳಿಸಬೇಕು ಎಂದು ನಗರದ ಸಾರ್ವಜನಿಕರ ಪರವಾಗಿ ವಿನಂತಿ.
ವೈ. ವಾದಿರಾಜ ಭಟ್
ವಕೀಲರು, ಎಸ್.ಪಿ.ಎಸ್. ನಗರ ನಿವಾಸಿ.