ನೂತನ ಬಸ್ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ

ಮಾನ್ಯರೇ,

ನಗರದ  ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿರುವ ಜನೌಷಧಿ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುಯಲ್ ಮೂಲಕ ಲೋಕಾರ್ಪಣೆಗೊಳಿಸಿರುವುದು ಸಂತೋಷದ ವಿಷಯ. ಅಂತೆಯೇ ಪ್ರಯಾಣಿಕರಿಗೆ ತುರ್ತಾಗಿ ಬೇಕಾಗಿರುವ ಅಗತ್ಯ ಔಷಧಿಗಳು ರೈಲ್ವೆ ನಿಲ್ದಾಣದಲ್ಲಿಯೇ, ಅತಿ ಹೆಚ್ಚಿನ ರಿಯಾಯಿತಿ ದರದಲ್ಲಿ ದೊರಕುತ್ತಿರುವುದು ಇನ್ನೂ  ಅನುಕೂಲ. ಹಾಗೆಯೇ ನಗರದಲ್ಲಿ  ನೂತನವಾಗಿ ನಿರ್ಮಾಣವಾಗಿರುವ  ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲು ಈ ಬಗ್ಗೆ ಚಿಂತಿಸಬೇಕಾಗಿದೆ. 

ಬಸ್ ನಿಲ್ದಾಣಗಳಲ್ಲಿ ತಿಂಡಿ ತಿನಿಸು ಹೋಟೆಲ್‌ಗಳ ಜೊತೆಗೆ, ಜನೌಷಧಿ ಕೇಂದ್ರಗಳಿಗೂ ಅನುಮತಿಸಲಿ. ಜನಸಾಮಾನ್ಯರು, ವಿಶೇಷಚೇತನರು, ವಯೋ ವೃದ್ಧರು  ದೂರದ ಪ್ರದೇಶಗಳಿಗೆ  ಜನೌಷಧಿ ಕೇಂದ್ರಗಳನ್ನು ಹುಡುಕಿಕೊಂಡು ಹೋಗುವುದು ತಪ್ಪುವುದರ ಜೊತೆಗೆ, ಪ್ರಯಾಣಿಕರಿಗೂ  ಸುಲಭವಾಗಿ ದೊರಕುತ್ತದೆ. ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗಂತೂ  ತುಂಬಾ ಅನುಕೂಲವಾಗುವುದರ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ . 

ಮಾನ್ಯ ಸಂಸದರು ಈ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

-ಮುರುಗೇಶ ಡಿ,   ದಾವಣಗೆರೆ.

error: Content is protected !!