ಮಾನ್ಯರೇ,
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೃತಪಟ್ಟಿದ್ದ ಆನೆಯ ಮೃತದೇಹ ನೋಡಲು ಗಜಪಡೆಯೇ ನೆರೆದಿದ್ದ ಮನಕಲಕುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವುದನ್ನು ಗಮನಿಸಿದರೆ ಪ್ರಾಣಿಗಳಲ್ಲೂ ತನ್ನ ಸಂಕುಲದ ಬಗ್ಗೆ ಅಪಾರ ಪ್ರೀತಿ, ಕರುಣೆ, ಮೈತ್ರಿ ಇರುವುದು ವ್ಯಕ್ತವಾಗುತ್ತದೆ. ಆದರೆ ಮಾನವೀ ಯತೆ ಇರಬೇಕಾದ ಮನುಷ್ಯರಲ್ಲೇ ಹೊಟ್ಟೆಕಿಚ್ಚು, ದ್ವೇಷ, ಅಸೂಹೆಗಳಿಂದ ತನ್ನ ತಂದೆ-ತಾಯಿ, ಒಡ ಹುಟ್ಟಿದವರು ಮರಣಿಸಿದಾಗಲೂ ಹಣ, ಆಸ್ತಿ ಜಗಳಗಳಿಂದ ನೋಡಲು ಹೋಗದ ಘಟನೆಗಳಿವೆ. ಆದರೆ ಇಲ್ಲಿ 17 ಆನೆಗಳ ಹಿಂಡು ಅವುಗಳನ್ನು ಯಾರೂ ಕರೆತರದೆ ತಾವೇ ಸ್ವಯಂ ಪ್ರೇರೇಪಣೆಯಿಂದ ಹುಡುಕಿಕೊಂಡು ಆನೆಯ ಮೃತದೇಹದ ಬಳಿ ಸಂತಾಪ ಸೂಚಿಸುವಂತೆ ನಿಂತಿರುವುದು ಎಲ್ಲಾ ಮಾನವರಿಗೆ ಪ್ರೀತಿ, ಮೈತ್ರಿಯ ಪಾಠ ಹೇಳುವಂತಿದೆ.
ಹುಟ್ಟಿದವರೆಲ್ಲಾ ಮರಣಿಸಲೇ ಬೇಕು. ಆದರೆ ಇರುವವರೆಗೆ ನನ್ನಿಂದ, ನನ್ನದು, ನಾನೇ ಎನ್ನುವ ಅಹಂ ಭಾವ, ಸಂಕುಚಿತತೆಯನ್ನು ಬಿಟ್ಟು `ನಮ್ಮಿಂದ, ನಮ್ಮದು, ನಾವು’ ಎನ್ನುವ ವಿಶಾಲ ಭಾವನೆ ಬೆಳೆಸಿಕೊಳ್ಳೋಣ. ಬಸವಣ್ಣನವರು ಹೇಳುವಂತೆ `ಇವನಾರವ, ಇವನಾರವ ಎಂದೆನಿಸದೆ, ಇವ ನಮ್ಮವ, ಇವ ನಮ್ಮವ, ನಮ್ಮ ಮನೆಯ ಮಗನೆಂದೆನಿಸಯ್ಯ’ ಎನ್ನುವ ವಚನ ಪಾಲಿಸೋಣ. ವಿವೇಕದ ಆಲೋಚನಾ ಶಕ್ತಿಯುಳ್ಳ ನಾವು ಮೃಗಗಳಿಗಿಂತ ಹೆಚ್ಚೆಚ್ಚು ಪ್ರೀತಿ, ಕರುಣೆ, ಮೈತ್ರಿ ಬೆಳೆಸಿಕೊಳ್ಳೋಣ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ