ಮಾನ್ಯರೇ,
ದುಷ್ಟ ಶಕ್ತಿಗಳ ದಮನದ ಸಂಕೇತವಾಗಿ ಆಚರಿಸುವ ವಿಜಯೋತ್ಸವವೇ ದೀಪಾವಳಿ. ಜನರ ನೆಮ್ಮದಿ ಹಾಗೂ ಶಾಂತಿಯನ್ನು ಹಾಳು ಮಾಡಿದ್ದಕ್ಕಾಗಿಯೇ ಅಂದು ನರಕಾಸುರನನ್ನು ಸಂಹರಿಸಲಾಯಿತು. ಆದರೆ ಇಂದು ಪಟಾಕಿ ಹೊಡೆದು ಸಾರ್ವಜನಿಕರ ನೆಮ್ಮದಿ, ಶಾಂತಿ ಹಾಳು ಮಾಡುತ್ತಿದ್ದೇವೆ. ವೈಚಾರಿಕವಾಗಿ ಗಮನಿಸಿದರೆ ನಮ್ಮೆಲ್ಲರಲ್ಲಿರುವ ಅಸತ್ಯ, ಅಸಹನೆ, ಭ್ರಷ್ಟಾಚಾರ, ಕ್ರೋಧ, ಮದ, ಮತ್ಸರ, ಅಸಮಾನತೆ, ದ್ವೇಷ, ಭೇದ- ಭಾವ ಇವುಗಳೇ ನರಕಾಸುರರು. ಇವುಗಳನ್ನು ನಾವು ಸಂಹರಿಸಬೇಕು. ದೀಪಾವಳಿ ಹಬ್ಬ ಬೆಳಕಿನ ಹಬ್ಬ ಶರಣರು ಹೇಳುವಂತೆ `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ’ ಕತ್ತಲೆಯಿಂದ ಬೆಳಕಿನೆಡೆಗೆ ಹೋಗಲು ನಾವು ಅಮಾವಾಸ್ಯೆ ಮುಗಿದ ಮಾರನೇ ದಿವಸ ದೀಪಾವಳಿಯನ್ನು ಆಚರಿಸುತ್ತೇವೆ. ಆದರೆ ಇಂದು ಕೇವಲ ಪಟಾಕಿಗಳನ್ನು ಸುಟ್ಟು ಅದರ ವಿಷಕಾರಕ ಅನಿಲವನ್ನು ಸೇವಿಸಿ, ಅತಿ ಶಬ್ದ ಮಾಲಿನ್ಯವನ್ನುಂಟು ಮಾಡುವ ದುಂದು ವೆಚ್ಚದ ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಅನಾಹುತದ ಸರಪಳಿಯ ಸರಮಾಲೆಯನ್ನುಡಿಸಿ ಸಂತೋಷ ಪಡುತ್ತೇವೆ. ಇದು ಯಾವ ಪುರುಷಾರ್ಥಕ್ಕೆ? ನಮ್ಮ ಸಂಭ್ರಮ ಇನ್ನೊಬ್ಬರ ನೋವಿಗೆ ಕಾರಣವಾಗುವುದಾದರೆ ಪಟಾಕಿಗಳನ್ನು ಸಿಡಿಸದೆ ಹಬ್ಬ ಆಚರಿಸಲಾಗದೆ?.
ಸರ್ಕಾರ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಬೇಕು. ಜೊತೆಗೆ ಹಸಿರು ಪಟಾಕಿ ಮಾತ್ರ ಹೊಡೆಯಬೇಕು ಎಂದು ಆದೇಶ ಹೊರಡಿಸಿದೆ. ಈ ಆದೇಶಗಳು ಮಾತಾಗದೆ ಮುಖ್ಯವಾಗಿ ಜಾರಿಗೆ ಬರಬೇಕು.ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರು ಇದಕ್ಕೆ ಕೈಜೋಡಿಸಬೇಕು. ಅಕ್ಕಪಕ್ಕದಲ್ಲಿ ರಾತ್ರಿ 10 ಗಂಟೆಯ ನಂತರ ಪಟಾಕಿ ಶಬ್ದ ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವುದರ ಮೂಲಕ ಸಹಕರಿಸಬೇಕು. ವಿವೇಕವುಳ್ಳ ನಾವು ಆತ್ಮಸಾಕ್ಷಿಯಿಂದ ವಾಯು ಮತ್ತು ಶಬ್ದ ಮಾಲಿನ್ಯದಿಂದ ನಮ್ಮ ಮಕ್ಕಳ, ಹಿರಿಯರ ಆರೋಗ್ಯದ ದುಷ್ಪರಿಣಾಮಗಳನ್ನು ಕಡೆಗಣಿಸುವುದು ಬೇಡವೇ ಬೇಡ. ದಾವಣಗೆರೆಯಲ್ಲಿ ಸಂಪೂರ್ಣ ಪಟಾಕಿಗಳ ಕರ್ಕಶ ಶಬ್ದ ಹಾಗೂ ದುರ್ವಾಸನೆ ಇಲ್ಲದ ದೀಪಾವಳಿ ಆಚರಿಸಿ ಕರ್ನಾಟಕದಲ್ಲಿ ಮಾದರಿ ನಗರವೆನಿಸಿಕೊಳ್ಳೋಣವೇ.
– ದಾವಣಗೆರೆ ಜಿಲ್ಲಾ ನೆಲ- ಜಲ, ಕರುಣಾ ಪ್ರಕೃತಿ, ಕ್ಲೀನ್ ಅಂಡ್ ಗ್ರೀನ್, ದಾವಣಗೆರೆ.