ಮಾನ್ಯರೇ,
ಪ್ಲಾಸ್ಟಿಕ್ ಬಳಕೆಯಿಂದ ದನ-ಕರುಗಳು, ಜನರು ರೋಗಗಳಿಗೆ ತುತ್ತಾಗಿ ಜೀವ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಪ್ಲಾಸ್ಟಿಕ್ ಚೆಲ್ಲುವುದರಿಂದ ಭೂಮಿಯೂ ಸಹ ಪ್ಲಾಸ್ಟಿಕ್ ನ ಕ್ಯಾನ್ಸರ್ ಪೀಡಿತವಾಗಿದೆ. ಪ್ಲಾಸ್ಟಿಕ್ ನಿಷೇಧ ಆಗುವುದು ಆದೇಶದಿಂದ ಮಾತ್ರ ಸಾಧ್ಯವಿಲ್ಲ. ಇದು ಕಾರ್ಯಗತವಾಗಲು ಆಡಳಿತಾಧಿಕಾರಿಗಳು ಬದ್ಧರಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು.
ಗಾಂಧೀಜಿಯವರು ಹೇಳುವಂತೆ `ನಾವು ಬಯಸುವ ಬದಲಾವಣೆ ಮೊದಲು ನಮ್ಮಿಂದಲೇ ಆಗಬೇಕು’ ನಾವು ಮಾರುಕಟ್ಟೆಗಳಿಗೆ ಹೋಗುವಾಗ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ಬಳಸಬಾರದು.
ನಿನ್ನೆ ಒಂದು ಸಮಾರಾಧನೆಗೆ ಹೋಗಿದ್ದೆ. ಪ್ರತಿಯೊಬ್ಬರಿಗೂ ಊಟದ ಜೊತೆ ಪ್ಲಾಸ್ಟಿಕ್ ಬಾಟಲ್ ಇಟ್ಟರು. ಇದು ಎಲ್ಲ ಕಾರ್ಯಕ್ರಮಗಳಲ್ಲಿ ಸರ್ವೇಸಾಮಾನ್ಯ ಮತ್ತು ಒಣ ಪ್ರೆಸ್ಟೀಜ್ ಆಗಿದೆ. ಆದರೆ ನಾನು ಇಂತಹ ಕಾರ್ಯಕ್ರಮಗಳಿಗೆ ಹೋಗುವಾಗ ಯಾವಾಗಲೂ ಸ್ಟೀಲ್ ಬಾಟಲ್‌ನಲ್ಲಿ ನೀರನ್ನು ತೆಗೆದುಕೊಂಡು ಹೋಗುತ್ತೇನೆ. ಸುತ್ತ-ಮುತ್ತ ಕಣ್ಣಾಯಿಸಿದರೆ ಯಾರೊಬ್ಬರೂ ನೀರು ತಂದಿರುವುದಿಲ್ಲ. ಜೊತೆಗೆ ಕೊಟ್ಟಿರುವ ಬಾಟಲಿಯಲ್ಲಿ ಅರ್ಧ ಮಾತ್ರ ಉಪಯೋಗಿಸಿರುತ್ತಾರೆ. ಇದು ಪರಿಸರಕ್ಕೂ ದೊಡ್ಡ ಹಾನಿ ಮತ್ತು ಕಾರ್ಯಕ್ರಮ ಮಾಡುವವರಿಗೆ ವೃಥಾ ಖರ್ಚು.
ಇತ್ತೀಚಿಗೆ ನನ್ನ ಮೊಮ್ಮಗಳು ಅಮೇರಿಕಾದಿಂದ ಮೊದಲ ಬಾರಿಗೆ ಬಂದ ಸಂಭ್ರಮ ಸಮಾರಂಭದಲ್ಲಿ ಅಡುಗೆಯವರಿಗೆ ಮೊದಲೇ ಹೇಳಿ ಪೇಪರ್ ಕಪ್‌ನಲ್ಲಿ ನೀರು ಕೊಡುವಂತೆ ಮಾಡಿದ್ದೆವು. ಈ ತರಹ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಪ್ಲ್ಯಾಸ್ಟಿಕ್ ನಿರ್ಮೂಲನೆಗೆ ನಾವೇ ಮಾದರಿಯಾಗಬೇಕು. ದಯವಿಟ್ಟು ಪರಿಸರಕ್ಕಾಗಿ ನಾವು ನಮ್ಮ
ನಡೆ-ನುಡಿಯನ್ನು ಒಂದಾಗಿಸಿಕೊಳ್ಳೋಣವೇ….?
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.