ಅಖಂಡ ಭಾರತದಲ್ಲಿ ಉರ್ದು ಮುಸ್ಲಿಮರ ಪ್ರಮುಖ ಭಾಷೆಯಾಗಿತ್ತೇ ?

ಮಾನ್ಯರೇ, 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋ ತ್ತಮ ಬಿಳಿಮಲೆ ಅವರು ನಗರದ ಸಮಾರಂಭ ವೊಂದರಲ್ಲಿ ಪಾಲ್ಗೊಂಡು ಮಾತನಾಡುವಾಗ ಬ್ರಿಟಿಷರ ಆಡಳಿತದಲ್ಲಿ ಉರ್ದು ಭಾಷೆಗೆ ಆದ್ಯತೆ ನೀಡದೇ ಮುಸ್ಲಿಂ ಸಮುದಾಯಕ್ಕೆ ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.

ಸರ್ಕಾರದ ಪ್ರಮುಖ ಹುದ್ದೆಗಳಿಗೆ ಮುಸ್ಲಿಮರು ಬಾರದಂತೆ ಬ್ರಿಟಿಷರು ಎಚ್ಚರ ವಹಿಸಿದ್ದರು. ಉರ್ದು ಭಾಷೆ ಬದಲು ಹಿಂದಿ ಭಾಷೆಗೆ ಆದ್ಯತೆ ನೀಡಲಾಯಿತು ಎಂದವರು ತಿಳಿಸಿದ್ದಾರೆ. ಆದರೆ, ಲಭ್ಯವಿರುವ ಸಾಮಾನ್ಯ ಜ್ಞಾನದ ಪ್ರಕಾರ, ಅಖಂಡ ಭಾರತದ ಮುಸ್ಲಿಮರೆಲ್ಲರೂ ಉರ್ದು ಮಾತನಾಡುತ್ತಿರಲಿಲ್ಲ. ಬ್ರಿಟಿಷರ ಕಾಲದಲ್ಲಿದ್ದ ಅಖಂಡ ಭಾರತವು ಸ್ವಾತಂತ್ರ್ಯಾನಂತರ ಮೂರು ಭಾಗವಾಗಿ ವಿಭಜನೆಯಾಯಿತು.

ಈಗಿನ ಬಾಂಗ್ಲಾದೇಶ ಸಂಪೂರ್ಣವಾಗಿ ಬಂಗಾಳಿ ಭಾಷೆ ಮಾತನಾಡುತ್ತಿದೆ. ಇಲ್ಲಿನ ಶೇ.99ರಷ್ಟು ಜನರು ಬಂಗಾಳಿ ಭಾಷಿಗರಾಗಿದ್ದಾರೆ. ಬಂಗಾಳಿ ಭಾಷೆಯ ಪ್ರೇಮವೇ ಅವರು ಪೂರ್ವ ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಪ್ರಮುಖ ಕಾರಣವಾಗಿದೆ.

ಉಳಿದಂತೆ ಪಾಕಿಸ್ತಾನದಲ್ಲೂ ಉರ್ದು ಮಾತನಾಡುವವರ ಸಂಖ್ಯೆ ಶೇ.9ರಷ್ಟು ಮಾತ್ರವಿದೆ. ಅಖಂಡ ಭಾರತದ ಇತಿಹಾಸ ಪರಿಗಣಿಸಿದಾಗ ಉರ್ದು ಭಾಷೆಗೂ ಮುಸ್ಲಿಮರಿಗೂ ಎಷ್ಟರ ಮಟ್ಟಿಗೆ ನಂಟಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಭಾರತವನ್ನು ವಿಭಜಿಸಿದಾಗ ಅತಿ ಹೆಚ್ಚಿನ ಮುಸ್ಲಿಮರು ಪಾಕಿಸ್ತಾನಕ್ಕೆ ಹಾಗೂ ಬಾಂಗ್ಲಾದೇಶಕ್ಕೆ ತೆರಳಿದರು. ಅವರು ತಮ್ಮದೇ ಆದ ಇತಿಹಾಸ ರಚಿಸಿಕೊಂಡಿದ್ದಾರೆ. ಹೀಗಾಗಿ ಅಖಂಡ ಭಾರತದ ಬಹುತೇಕ ಮುಸ್ಲಿಮರು ತಮ್ಮ ಕೊಡುಗೆಯನ್ನು ತಾವು ಸರಿಯಾಗಿ ದಾಖಲಿಸಿಕೊಂಡಿದ್ದಾರೆ ಎಂದು ಭಾವಿಸಬಹುದು. ಇಲ್ಲವೆಂದಾದರೆ, ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶವನ್ನು ಸಂಪರ್ಕಿಸಿ ಈ ಬಗ್ಗೆ ಸರಿಪಡಿಸಲು ಕೋರಬೇಕಾಗುತ್ತದೆ.

ಸರ್ಕಾರದ ಪ್ರಮುಖ ಹುದ್ದೆಗಳಿಗೆ ಮುಸ್ಲಿಮರು ಬಾರದಂತೆ ಬ್ರಿಟಿಷರು ಎಚ್ಚರ ವಹಿಸಿದ್ದರು ಎಂದೂ ಬಿಳಿಮಲೆ ಹೇಳಿದ್ದಾರೆ. ಬ್ರಿಟಿಷರ ಆಡಳಿತದಲ್ಲಿ ಸಾಕಷ್ಟು ಸಂಸ್ಥಾನಗಳು ಮುಸ್ಲಿಂ ರಾಜರ ಬಳಿ ಇದ್ದವು. ಈ ಮುಸ್ಲಿಂ ರಾಜರು ತಮ್ಮ ಸಂಸ್ಥಾನದ ಪ್ರಮುಖ ಹುದ್ದೆಗಳಿಗೆ ಮುಸ್ಲಿಮರು ಬರದಂತೆ ನೋಡಿಕೊಂಡಿದ್ದರೇ? ಈ ಬಗ್ಗೆ ಇತಿಹಾಸಕಾರರು ಸಂಶೋಧನೆ ನಡೆಸಬೇಕಿದೆ.

ಪ್ರಾಚೀನ ಭಾರತದುದ್ದಕ್ಕೂ ಸಂಸ್ಕೃತವು ಉನ್ನತ ವ್ಯಾಸಂಗದ ಭಾಷೆಯಾಗಿತ್ತು. ಸಂಸ್ಕೃತದಲ್ಲಿ ಪುರಾಣಗಳಷ್ಟೇ ಅಲ್ಲದೆ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳೆಲ್ಲವೂ ಇದ್ದವು. ಇಂತಹ ಸಂಸ್ಕೃತವನ್ನೇ ಬ್ರಿಟಿಷರ ಕಾಲದಲ್ಲಿ ಕೈ ಬಿಡಲಾಯಿತು. ಇದರಿಂದ ಹಿಂದೂ ಸಮಾಜಕ್ಕೆ ಆದ ಆಘಾತ ಅಪಾರ. ಬ್ರಿಟಿಷರ ಆಡಳಿತದಲ್ಲಿ ಅವರಿವರೆನ್ನದೇ ಭಾರತದ ಎಲ್ಲ ಸಮುದಾಯಗಳು ಸಂಕಷ್ಟದಿಂದ ನಲುಗಿದ್ದವು. ಹೀಗಿರುವಾಗ ಮುಸ್ಲಿಮರನ್ನೇ ಪ್ರತ್ಯೇಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದರು ಎಂದು ಗುರುತಿಸುವುದರಲ್ಲಿ ಯಾವ ಅರ್ಥವಿದೆಯೋ ಗೊತ್ತಿಲ್ಲ. 

– ಜಿ.ಎನ್. ಕಾಮತ್, ದಾವಣಗೆರೆ.

error: Content is protected !!