ಕಸ ತುಂಬಿರುವ ದಾವಣಗೆರೆ

ಕಸ ತುಂಬಿರುವ ದಾವಣಗೆರೆ

ಮಾನ್ಯರೇ,

ದಾವಣಗೆರೆ ನಗರವು ಯಾವಾಗ ಸ್ವಚ್ಛ ನಗರವಾಗುತ್ತದೆ? ಯಾಕೆ ನಮ್ಮಲ್ಲಿ ನಾಗರಿಕ ಪ್ರಜ್ಞೆಯೇ ಸತ್ತುಹೋಗಿದೆ…ಎಲ್ಲಿ ನೋಡಿದರೂ ಕಸ. ನಾವು ಆಂಜನೇಯ ಬಡಾವಣೆಯ ಹಿತರಕ್ಷಣಾ ಸಮಿತಿಯಿಂದ ಒಂದಾರು ಜನ  ಪ್ರತಿ ಭಾನುವಾರ ಒಂದು ಗಂಟೆ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತೇವೆ. ಎಷ್ಟು ಕ್ಲೀನ್ ಮಾಡಿದರೂ ಒಂದು ಗಂಟೆಯಲ್ಲೇ ಮತ್ತೆ ರಸ್ತೆಗಳಲ್ಲಿ, ಖಾಲಿ ಸೈಟ್‌ಗಳಲ್ಲಿ ಕಸ ಬಿದ್ದಿರುತ್ತದೆ. ಏಕೆ ಹೀಗೆ? ಜನರು ಕಸವನ್ನು ಎಲ್ಲಿ ಬೇಕಂದರಲ್ಲಿ ಹಾಕುತ್ತಾರೆ.

ಮನೆಗಳವರು ಕಸವನ್ನು ಗಾಡಿಗೆ ಕೊಡುತ್ತಾರೆ. ಆದ್ರೆ ಓದಲು ಅಂತ ಬಂದ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ, ಪಿ.ಜಿ. ಗಳಲ್ಲಿ ಇರುವ ವಿದ್ಯಾರ್ಥಿಗಳು, ರೂಮ್ ಮಾಡಿಕೊಂಡಿರುವ ಹುಡುಗ, ಹುಡುಗಿಯರು, ಆಟೋ ಡ್ರೈವರ್‌ಗಳು, ಶಾಲೆಗೆ ಹೋಗುವ ಮಕ್ಕಳು, ಮನೆ ಕಟ್ಟುವ ಕೆಲಸಗಾರರು, ಕಾಲೇಜು ವಿದ್ಯಾರ್ಥಿಗಳು ಪ್ರತಿಯೊಬ್ಬರೂ ತಿಂದು ಪ್ಯಾಕೆಟ್ ಅನ್ನು ಅಲ್ಲೇ ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ಗುಟ್ಕಾ, ಆರ್. ಎಮ್. ಡಿ., ವಿಮಲ್,  ಪಾನ್ ಪರಾಗ್ ಚೀಟಿಗಳು, ಕಾಫಿ ಪೇಪರ್ ಕಪ್ಪುಗಳು, ಚಾಕ್ಲೆಟ್ ಕವರ್‌ಗಳು, ಐಸ್ ಕ್ರೀಮ್ ಕಡ್ಡಿಗಳು, ಲಾಲಿಪಾಪ್ ಕಡ್ಡಿಗಳು, ಚಿಪ್ಸ್ ಪ್ಯಾಕೆಟ್ ಗಳು, ಬಿಸ್ಕಿಟ್ ಕವರ್‌ಗಳು, ಹಾಲ್ಸ್ ಚುಯಿಂಗ್ ಗಮ್ ರಾಪರ್‌ಗಳು, ಪ್ಲಾಸ್ಟಿಕ್ ಕವರುಗಳು, ನೀರಿನ ಬಾಟಲಿಗಳು, ಸಿಗರೇಟ್ ತುಂಡುಗಳು, ಪಾರ್ಸೆಲ್ ಕವರ್‌ಗಳು, ರಾತ್ರಿ ಕುಡಿದ ಬಾಟಲಿಗಳು ಇವುಗಳನ್ನು ರಸ್ತೆಯಲ್ಲಿ, ಖಾಲಿ ಸೈಟುಗಳಲ್ಲಿ, ಪಾರ್ಕುಗಳಲ್ಲಿ ಬಿಸಾಕುತ್ತಾರೆ.  

ಹಂದಿ, ನಾಯಿಗಳು ಕವರ್‌ಗಳನ್ನು ಎಳೆದಾಡಿ ಕಸ ರಸ್ತೆಯ ಮಧ್ಯಕ್ಕೆ ಬಂದಿರುತ್ತದೆ….  ಇನ್ನು ಚರಂಡಿಗಳ ಕತೆಯನ್ನಂತೂ ಹೇಳುವ ಹಾಗೆ ಇಲ್ಲ. ಮೇಲೆ ಹೇಳಿದ ಕಸ, ಮಣ್ಣು ಕಟ್ಟಿಗೊಂಡು ಕೊಳೆತು ನಾರುತ್ತಿವೆ… ಕಸ, ಕಸ, ಕಸ. ರಸ್ತೆಯಲ್ಲಿ ಹಾಗೆ ಎಲ್ಲೆಂದರಲ್ಲಿ ಬಿಸಾಕ್ಬೇಡಿ ಅಂದ್ರೆ ಅವರು ತಿರುಗಿ ಕೇಳುತ್ತಾರೆ “ಕಸವನ್ನು ಎಲ್ಲಿ ಹಾಕಬೇಕು?”. ಹೌದು ಅದಕ್ಕೆ ನಮ್ಮಲ್ಲಿ ಉತ್ತರ ಇಲ್ಲ. ಏಕೆಂದರೆ ಎಲ್ಲಿಯೂ ಕಸದ ಬುಟ್ಟಿಯನ್ನು ಇಟ್ಟಿಲ್ಲ. ಪ್ರತಿ ಅಂಗಡಿಗಳಲ್ಲೂ, ಪ್ರತಿ  ರಸ್ತೆಯ ಎರಡೂ ಬದಿಗಳಲ್ಲಿ ಕಸದ ಬುಟ್ಟಿಗಳನ್ನು ಇಡಬೇಕು ಹಾಗೂ ಅವುಗಳನ್ನು ಪ್ರತಿದಿನ ತೆಗೆದುಕೊಂಡು ಹೋಗಬೇಕು. ಹಸಿ ಕಸ, ಒಣ ಕಸಗಳಿಗೆ ಬೇರೆ ಬೇರೆ ಡಬ್ಬಿ ಇಡಬೇಕು. ರಿಸೈಕಲ್ ಮಾಡಬೇಕು.  ಇಷ್ಟು ಮಾಡಿದರೆ ನಗರವು ಸ್ವಚ್ಛವಾಗಿ ಇರುತ್ತದೆ. 

– ಮಮತಾ ನಾಗರಾಜ್, ಆಂಜನೇಯ ಬಡಾವಣೆ, ದಾವಣಗೆರೆ.

error: Content is protected !!