ಮಾನ್ಯರೇ,
ನಗರದ ಹೃದಯ ಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜನನಿಬಿಡ ಪ್ರದೇಶ, ಗಾಂಧಿ ವೃತ್ತದ ಬಳಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ದಿನಂಪ್ರತಿ ನಡೆಯುವ ಅಪಘಾತಗಳನ್ನು ತಪ್ಪಿಸಿ ಮಹಾಸ್ವಾಮಿಗಳೇ ಎಂಬುದು ಇಲ್ಲಿ ಸಂಚರಿಸುವ ವಾಹನ ಸವಾರರ ಮನವಿಯಾಗಿದೆ.
ಉತ್ತರ ದಿಕ್ಕು ಜಗಳೂರು ರಸ್ತೆಯಿಂದ ಪ್ರವೇಶಿಸುವ ಸಂಚಾರಿಗಳಿಗೆ ಮೋತಿ ಚಿತ್ರ ಮಂದಿರದ ಎದುರು ಇರುವ ಗುಂಡಿ ಹಾಗೂ ಗಾಂಧಿ ವೃತ್ತದಿಂದ ಅಶೋಕ ರಸ್ತೆ ಪ್ರವೇಶಿಸುವ ಪೊಲೀಸ್ ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮೆರಾ ಕಂಬದ ಬಳಿ ಇರುವ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಬಿದ್ದು ಸಾಗುವ ದೃಶ್ಯಗಳು ಸಾಮಾನ್ಯವಾಗಿವೆ.
ಮುಂದೆ ಸಾಗುವ ವಾಹನ ಸವಾರ ಗುಂಡಿ ಕಂಡ ತಕ್ಷಣ ದಿಢೀರ್ ಬ್ರೇಕ್ ಹಾಕಿದಾಗ ಹಿಂದಿನ ಸವಾರ ಡಿಕ್ಕಿ ಹೊಡೆದು ಅಪಘಾತದ ಬಾಯಿಗೆ ತುತ್ತಾಗುತ್ತಾನೆ. ಸಿನಿಮೀಯ ರೀತಿಯಲ್ಲಿ ಪಾರಾಗುವ ಕೆಲವರಂತು ಅದೃಷ್ಟವಶಾತ್ ಬಚಾವ್ ಆದೆ ಎಂದು ನಿಟ್ಟಿಸಿರು ಬಿಡುತ್ತಾ ಮುಂದೆ ಸಾಗುತ್ತಾರೆ.
ಮಳೆಗಾಲವಾಗಿರುವುದರಿಂದ ಯಾವುದು ಗುಂಡಿ, ಯಾವುದು ರಸ್ತೆ ಎಂಬುದು ತಿಳಿಯಲು ಬಹಳ ಕಷ್ಟವಾಗಿದೆ. ಆದ್ದರಿಂದ ನಗರದ ವಿವಿಧ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ, ಅಪಘಾತಗಳನ್ನು ತಪ್ಪಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಾಗಿದೆ.
– ಬಿ. ಸಿಕಂದರ್, ಹಿರಿಯ ಪತ್ರಕರ್ತರು