ಅನೈತಿಕ, ಅಡ್ಡದಾರಿ ಹಿಡಿದು ದೇವಿಯರ ಮೊರೆ ಹೋಗುವುದು ಭ್ರಮೆ

ಮಾನ್ಯರೇ, 

ಚಿತ್ರನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ದರ್ಶನ್ ಗೆ ಜೈಲಿನಲ್ಲಿ ಮನೆ ಊಟಕ್ಕಾಗಿ ಕೊಲ್ಲೂರಿನ ಮೂಕಾಂಬಿಕಾ ದೇವಿಗೆ ಮಹಾಚಂಡಿಕಾ ಯಾಗ ಮತ್ತು ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ಮಾಡಿಸಿ, ದೇವತೆಗಳ ಮೊರೆ ಹೋಗಿರುವುದು ವಿರೋಧಾಭಾಸವಾಗಿದೆ.  

ಕೆಲವು ತಿಂಗಳ ಹಿಂದೆ ತಮ್ಮ ಕುಟುಂಬ ಕಾನೂನು ಸಂಕಷ್ಟಗಳಿಂದ ಬಿಡುಗಡೆ ಹೊಂದಲು ಪುರೋಹಿತರ ಮಾತಿನಂತೆ ಹೆಚ್.ಡಿ. ರೇವಣ್ಣ 9 ಶಕ್ತಿ ದೇವಿಯರ ಮೊರೆ ಹೋಗಿ ಪೂಜೆ, ಪೌರೋಹಿತ್ಯ, ಯಾಗ, ಯಜ್ಞ ಮಾಡಿ, ಮಾಡಿದ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳಬಹುದೆಂಬುದು  ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಇವು ಅನೈತಿಕ, ಅಡ್ಡದಾರಿ ಹಿಡಿದರೂ ದೇವತೆಗಳ ಒಲಿಸಿಕೊಂಡು ಜಯ ಸಂಪಾದಿಸಬಹುದೆಂಬ ಭ್ರಮೆಯನ್ನುಂಟುಮಾಡಿ ಅಂಧಭಕ್ತರ ದಾರಿ ತಪ್ಪಿಸುವ ಉದಾಹರಣೆಗಳು.

ಇವರಿಬ್ಬರ ವಿಷಯದಲ್ಲಿ  ಮಾಡಿದುಣ್ಣೋ ಮಾರಾಯ, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎನ್ನುವ ಗಾದೆ ಮಾತು ಸತ್ಯವಾಗಿದೆ. ಯಾರೇ ಆಗಲಿ ಅಧಿಕಾರ, ಕಾಮಿನಿ, ಕಾಂಚಾಣ, ಕಾಸಿನ ವಿಷಯಗಳಲ್ಲಿ ನೀತಿ ತಪ್ಪಿ ದೇವರ ಮೊರೆ ಹೋಗಿ ದೇವರು ರಕ್ಷಿಸುತ್ತಾರೆನ್ನುವುದು  ಮೌಢ್ಯದ ಭ್ರಮೆಗಳು.  ನಮಗೆಲ್ಲ ತಿಳಿದಿರುವಂತೆ ದೇವರ ಕಲ್ಪನೆ ಸತ್ಯಕ್ಕೆ ಜಯ, ಅಸತ್ಯಕ್ಕೆ ಸೋಲು. `ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ’ ಎನ್ನುವುದಲ್ಲವೇ?.

– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ

error: Content is protected !!