ಮಾನ್ಯರೇ,
ಸಿದ್ದವೀರಪ್ಪ ಬಡಾವಣೆ ನಾಗರಿಕ ಹಿತರಕ್ಷಣಾ ಸಂಘಟನೆ ಹಾಗೂ ಪರಿಸರ ಪ್ರೇಮಿಗಳು ಇಲ್ಲಿ ಗಿಡ ನೆಟ್ಟು ನೀರೆರೆದು, ಮರಗಳನ್ನು ಬೆಳೆಸಿರುವುದು ಸ್ವಾಗತಾರ್ಹ. ಅವುಗಳಲ್ಲಿ ಕೆಲವು ದಟ್ಟವಾಗಿ ಬೆಳೆದು ರೆಂಬೆ- ಕೊಂಬೆಗಳು ಓಡಾಡುವ ರಸ್ತೆ ಹಾಗೂ ಪಾದಚಾರಿ ರಸ್ತೆ ಆಕ್ರಮಿಸಿಕೊಂಡಿರುವುದರಿಂದ ಜನರ ಓಡಾಟಕ್ಕೆ ಅನಾನುಕೂಲವಾಗಿದೆ.
ಬಿ.ಐ.ಇ.ಟಿ ರಸ್ತೆಯಿಂದ ಶಾಮನೂರಿಗೆ ಹೋಗಲು ಸಿದ್ದವೀರಪ್ಪ ಬಡಾವಣೆ 1 ರಿಂದ 14ನೇ ಅಡ್ಡ ರಸ್ತೆಯಲ್ಲಿ ಹಂಪ್ಸ್‌ಗಳಿಲ್ಲದ ಕಾರಣ ಆಟೋ, ದ್ವಿಚಕ್ರ ಹಾಗೂ ಕಾರುಗಳ ಅತ್ಯಂತ ವೇಗವಾಗಿ ಓಡಾಡುತ್ತವೆ. ಹೀಗಾಗಿ, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಇಲ್ಲಿನ ರಸ್ತೆಗಳನ್ನು ದಾಟಿ ಹೋಗಲು ಭಯಪಡುತ್ತಾರೆ. ಇದಕ್ಕೆ ಕಾರಣ ಅಡ್ಡಾದಿಡ್ಡಿ ಬೆಳೆದಿರುವ ಮರಗಿಡಗಳ ಕೊಂಬೆಗಳು. ಅವುಗಳನ್ನು ನೆಲದಡಿಯಿಂದ ಎಳೆಂಟು ಅಡಿ ಎತ್ತರದವರೆಗೆ ಕತ್ತರಿಸುವುದರಿಂದ ರಸ್ತೆಯಲ್ಲಿ ಆ ತುದಿಯಿಂದ ಈ ತುದಿಯವರೆಗೆ ಜನರ ಕಣ್ಣಿಗೆ ಬರುವ ವಾಹನಗಳು ಕಾಣುವಂತಾದರೆ, ರಸ್ತೆ ದಾಟುವಾಗ ಆ ಕಡೆ, ಈ ಕಡೆ ನೋಡುತ್ತಾ ಜಾಗ್ರತೆಯಿಂದ ಹೋಗಲು ಸಹಾಯಕವಾಗುತ್ತವೆ. ಸಂಬಂಧಪಟ್ಟ ಇಲಾಖೆಯವರು ಇದನ್ನು ಗಮನಿಸಬೇಕಾಗಿದೆ.
– ಎಂ.ವಿ.ವೆಂಕಟೇಶ್, ಸಿದ್ದವೀರಪ್ಪ ಬಡಾವಣೆ, ದಾವಣಗೆರೆ.