ಮಾನ್ಯರೇ,
ಹವಾಮಾನ ವರದಿಯ ಪ್ರಕಾರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ 40% ಬಿಸಿಲಿಗಿಂತ ಹೆಚ್ಚಾಗಿ ಬಿಸಿಗಾಳಿ ಬೀಸುವುದರಿಂದ ಬ್ರೈನ್ ಸ್ಟ್ರೋಕ್ ಆಗಿ ಸಾಯುವ ಸಾಧ್ಯತೆಗಳು ಇವೆ ಎನ್ನುವುದು ತಜ್ಞರ ಅಭಿಪ್ರಾಯ. ಜನರ ಆರೋಗ್ಯದ ದೃಷ್ಠಿಯಿಂದ ತಜ್ಞರು ಬೆಳಿಗ್ಗೆ 11 ರಿಂದ 4 ಗಂಟೆವರೆಗೆ ಬಿರು ಬಿಸಿಲಿನಲ್ಲಿ ಓಡಾಡಬಾರದೆಂಬ ಸೂಚನೆ ನೀಡಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆ ಬಿರುಬಿಸಿಲಿನಲ್ಲಿ ನಡೆಯುತ್ತಿರುವುದರಿಂದ ಅದರ ಪ್ರಚಾರಕ್ಕಾಗಿ ಬೃಹತ್ ಬಹಿರಂಗ ಸಭೆಗಳು, ಬೀದಿ ಮೆರವಣಿಗೆಗಳು ಹೆಚ್ಚಾಗುತ್ತವೆ. ಆದರೆ ವಿಪರ್ಯಾಸವೆಂದರೆ ಚುನಾವಣೆ ಪ್ರಚಾರಕ್ಕಾಗಿ ಹೆಚ್ಚು ಭಾಗವಹಿಸುವವರು ಬಡವರು. ಆದ್ದರಿಂದ ಚುನಾವಣೆಯ ಮೆರವಣಿಗೆ, ಸಭೆಗಳನ್ನು ದಯವಿಟ್ಟು ನಿಷೇಧ ಮಾಡಬೇಕು. ಇಲ್ಲವೆ ಮೊಟಕುಗೊಳಿಸುವುದು ಉತ್ತಮ. ಪ್ರಚಾರ ಮಾಡಲೇಬೇಕು ಎನ್ನುವಂತಿದ್ದರೆ ಈಗಾಗಲೇ ತಾಂತ್ರಿಕವಾಗಿ ಸಾಕಷ್ಟು ಜನ ಮುಂದುವರೆದಿದ್ದು ಸಾಮಾಜಿಕ ಮಾಧ್ಯಮ, ಟಿ.ವಿ. ಮೊಬೈಲ್‍ಗಳನ್ನು ಬಳಸಿಕೊಂಡು ಪ್ರಚಾರ ಮಾಡಬಹುದಲ್ಲವೇ?. ಇದನ್ನು ಮನಗಂಡು ಸುಪ್ರೀಂ ಕೋರ್ಟ್ ಎಲೆಕ್ಷನ್ ಕಮೀಷನ್ ಮತ್ತು ರಾಜಕೀಯ ಪಕ್ಷಗಳಿಗೆ ಸಭೆ, ಪ್ರಚಾರಗಳನ್ನು ಬಿಸಿಲಿನಲ್ಲಿ ಮಾಡದಂತೆ ನಿರ್ದೇಶನ ನೀಡಲಿ.
ಅಲ್ಲದೆ ಚುನಾವಣೆಗೆ ನಿಲ್ಲುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ಜನರಿಗೆ ಈಗಾಗಲೆ ಹತ್ತಾರು ವರ್ಷಗಳಿಂದ ಪರಿಚಯವಿರುವುದರಿಂದ ಈ ಅಬ್ಬರದ ಸಭೆಗಳ, ಪ್ರಚಾರದ ಅವಶ್ಯಕತೆ ಇರುವುದೇ? ಅಲ್ಲದೆ ಗೆಲುವಿಗಾಗಿ ಮನೆ ಮನೆಗಳಿಗೆ ಹೋಗಿ ಹಣ, ವಸ್ತುಗಳ ಆಮಿಷ ಒಡ್ಡುವ ಪ್ರಕ್ರಿಯೆ ಅಪರಾಧವಾದ್ದರಿಂದ ಇದನ್ನೂ ನಿಲ್ಲಿಸಬೇಕು.
ಜಾರ್ಜ್ ಬರ್ನಾಡ್ ಷಾ ಪ್ರಕಾರ `ಚುನಾವಣೆ ರಕ್ತಪಾತ ಯುದ್ಧ ಅಷ್ಟೆ, ಯುದ್ದದ ಕೆಡುಕುಗಳೆಲ್ಲವೂ ಚುನಾವಣೆಗಳಲ್ಲಿರುತ್ತವೆ’. ಹಾಗಾಗಿ ಚುನಾವಣೆಗೆ 20, 30 ಕೋಟಿ ಹಣ ಖರ್ಚು ಮಾಡಿದರೆ ಆ ಹಣವನ್ನು ಪುನಃ ಗಳಿಸಲು, ಭ್ರಷ್ಟಾಚಾರಕ್ಕೆ ಚುನಾವಣೆಯೇ ಮೂಲ ವಾಗುವುದಿಲ್ಲವೆ? ಇದನ್ನು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಪ್ರಜ್ಞಾವಂತ ಮತದಾರರು ದೇಶದ ಹಿತದೃಷ್ಠಿಯಿಂದ ವಿರೋಧಿಸಬೇಕು. ಆಗ ಮಾತ್ರ ಶ್ರೀಮಂತರಲ್ಲದೆ ಜನಸಾಮಾನ್ಯರೆಲ್ಲರೂ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಸರಳವಾಗಿ ಚುನಾವಣೆ ನಡೆದರೆ ಮಾತ್ರ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯ ನಿಜವಾಗಿಯೂ ಈಡೇರಿದಂತಾಗುತ್ತದೆ.
– ಶಿವನಕೆರೆ ಬಸವಲಿಂಗಪ್ಪ. ದಾವಣಗೆರೆ.