ರಾಜ್ಯದಲ್ಲಿ ಕುಟುಂಬ ರಾಜಕಾರಣದ ವಿಜೃಂಭಣೆ

ಮಾನ್ಯರೇ,

ಕರ್ನಾಟಕ ಲೋಕಸಭಾ ಚುನಾವಣೆಯ ಎಲ್ಲ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದಾಗ, ರಾಜಕೀಯ ನಾಯಕರ  ಕುಟುಂಬ ಸದಸ್ಯರಾದ ಅಪ್ಪ-ಮಗ, ಗಂಡ-ಹೆಂಡತಿ, ಅಪ್ಪ-ಮಗಳು, ಭಾವ-ಮೈದುನ ಈ ರೀತಿಯ ಹೆಸರುಗಳು ಚಾಲ್ತಿಯಲ್ಲಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲೂ ಕಂಡು ಬರುತ್ತಿದೆ.

ಕುಟುಂಬ ರಾಜಕಾರಣ ಪೋಷಿಸುತ್ತಿರುವ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುತ್ತಿವೆ. ಸಾಮಾನ್ಯ ಜನರು, ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದ ಹಾಗೆ ಈ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿವೆ. ಹಣದ ಪ್ರಭಾವ ಮತ್ತು ಕುಟುಂಬ ರಾಜಕಾರಣ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ.

ಹಣದ ಪ್ರಭಾವ ಇಂದಿನ ದಿನಮಾನಗಳಲ್ಲಿ ಪಕ್ಷವನ್ನು ನಿಯಂತ್ರಣ ಮಾಡುತ್ತಿರುವುದರಿಂದ  ಪ್ರಜ್ಞಾವಂತರು, ಬುದ್ದಿಜೀವಿಗಳು ಮತ್ತು ಸಾಮಾನ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೇ ಇಲ್ಲದಂತಾಗಿ, ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲದಂತಾಗಿದೆ.

 ಬೀದರ್‌ ನಿಂದ ಚಾಮರಾಜನಗರದವರೆಗಿನ ಸುಮಾರು 20 ಕ್ಷೇತ್ರಗಳಲ್ಲಿ, 2 ಪಕ್ಷಗಳ  ಅಭ್ಯರ್ಥಿ ಪಟ್ಟಿಯಲ್ಲಿ ಕುಟುಂಬದ ಸದಸ್ಯರೇ ಹೆಚ್ಚಿನ ಸ್ಥಾನ ಪಡೆದಿರುವುದು ಆತಂಕದ ವಿಷಯವಾಗಿದೆ.

ಯಾವ ನಾಯಕನು ಕೂಡ ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಕಾರ್ಯಕರ್ತರ ಮತ್ತು ಪ್ರಜ್ಞಾವಂತರ ಹೆಸರು ಸೂಚಿಸಲು ತಯಾರಿಲ್ಲ. ಏಕೆಂದರೆ `ರಾಜಕೀಯ’ ಹಣ ಉತ್ಪಾದನೆಯ ಕಾರ್ಖಾನೆಯೆಂದು ತಿಳಿದಿರುವುದರಿಂದ ಕುಟುಂಬ ರಾಜಕೀಯ ರಾರಾಜಿಸುತ್ತಿದೆ.

ರಾಷ್ಟ್ರೀಯ ಪಕ್ಷಗಳಿಗೆ ಮಾನ ಮರ್ಯಾದೆ  ಇದ್ದರೆ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ನಾಶವಾಗುವ ದಿನಗಳು ದೂರವಿಲ್ಲ.

– ಎಂ.ಟಿ. ಸುಭಾಷ್‌ಚಂದ್ರ, ಅಧ್ಯಕ್ಷರು, ಸಮತಾ ಸಾಂಸ್ಕೃತಿಕ ವೇದಿಕೆ, ದಾವಣಗೆರೆ.

error: Content is protected !!