ಕನ್ನಡ-ಕನ್ನಡಿಗ-ಕರ್ನಾಟಕದ ಕಥೆ-ವ್ಯಥೆ

ಮಾನ್ಯರೇ,

ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳಿಗೆ ಸಂಬಂಧಿಸಿದಂತೆ ಜಲ ಸಂಪನ್ಮೂಲದ ಬಳಕೆ, ವಿದ್ಯುಚ್ಛಕ್ತಿಯ ಉತ್ಪಾದನೆ ಮತ್ತು ಬಳಕೆ, ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ, ಉದ್ಯೋಗ ವ್ಯವಸ್ಥೆಗಳು ಮುಂತಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಸರಪಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ನಿಮ್ಮ ತೀವ್ರ ಅವಗಾಹನೆಗೆಂದು ತಿಳಿಸಲಿಚ್ಚಿಸುತ್ತೇನೆ.

ಪ್ರಸ್ತುತ ಕನ್ನಡ ನಾಡಿಗೆ ಕಗ್ಗಂಟಾಗಿ ಪರಿಣಮಿಸಿರುವ ಕಾವೇರಿ ನದಿ ನೀರಿನ ಸಮಸ್ಯೆ, ಕರ್ನಾಟಕದ ಬಹುಪಾಲು ಜನತೆಯ ಕುಡಿಯುವ ನೀರಿನ ಮತ್ತು ವ್ಯವಸಾಯ ಕ್ಷೇತ್ರದ ಬಹುಮಟ್ಟಿನ ಅಗತ್ಯಗಳನ್ನು ಪೂರೈಸುವ ಕಾವೇರಿ ನದಿಯು ಕರ್ನಾಟಕದ ಜೀವನದಿ, ಕಾವೇರಿ ನೀರು ತಮಿಳುನಾಡಿನ ಅಗತ್ಯಗಳಿಗೂ ಪೂರಕವಾಗಿದೆ ಎಂಬುದು ನಿಜ, ಆದರೆ ಈ ಎರಡೂ ರಾಜ್ಯಗಳ ಬೇಡಿಕೆಗಳಿಗೆ ಸ್ಪಂದಿಸುವ ಆಶಯದಲ್ಲಿ ಕರ್ನಾಟಕಕ್ಕೆ ಅಪಾರ ಅನ್ಯಾಯವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ಮಳೆಗಾಲದಲ್ಲಿ ಅಗಾಧ ಪ್ರಮಾಣದಲ್ಲಿ ಸಾಗರಕ್ಕೆ ಹರಿದು ಹೋಗುವ ಕಾವೇರಿಯ ನೀರನ್ನು ಶೇಖರಿಸಿಟ್ಟು, ಅದನ್ನು ಮಳೆಗಾಲದ ನಂತರ ಬಳಸಿ ಕೊಳ್ಳುವ ಅತ್ಯಂತ ಸಮರ್ಪಕವಾದ ಉದ್ದೇಶದಿಂದ ಕರ್ನಾಟಕದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ,

ಇದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು, ತಮಿಳುನಾಡಿನಲ್ಲೂ ಹಲವಾರು ಜಲಾಶಯಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ಆ ರಾಜ್ಯದ ಮೂಲಕ ಹಾದುಹೋಗುವ ಕಾವೇರಿ ಜಲರಾಶಿಯನ್ನು ಹಿಡಿದಿಟ್ಟುಕೊಂಡು ಮುಂದೆ ಬಳಸಿಕೊಳ್ಳುವುದು ಸೂಕ್ತವಾದ ಕ್ರಮವಾಗಿರುತ್ತದೆ. ಇದು ಆ ರಾಜ್ಯದ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತದೆ. ಅಲ್ಲದೆ ಇದರಿಂದ ಆ ರಾಜ್ಯದಲ್ಲಿನ ಅಂತರ್ಜಲದ ಮಟ್ಟವು ಹೆಚ್ಚಾಗುತ್ತದೆ, ಇಂತಹ ಕಾರ್ಯಕ್ರಮಗಳಿಗೆ ಯಾವ ರೀತಿಯ ಅಡ್ಡಿ, ಆತಂಕಗಳು ಇರುವುದಿಲ್ಲ. ಆದರೆ ಕರ್ನಾಟಕದ ಜಲಾಶಯಗಳಲ್ಲಿ ಶೇಖರವಾಗುವ ಬಹುಪಾಲು ನೀರನ್ನು ತಮಗಾಗಿಯೇ ಮೀಸಲಾಗಿಟ್ಟು ಮಳೆಗಾಲದ ನಂತರ ತಮಗೆ ನೀಡಬೇಕೆಂದು ಸರ್ವವಿಧದ ಒತ್ತಡ ಹೇರುತ್ತಿರುವುದು ಅತ್ಯಂತ ದುರದೃಷ್ಟಕರ, ಈ ಒತ್ತಡಕ್ಕೆ ಮಣಿಯುವ ಕೇಂದ್ರ ಸರ್ಕಾರ ಹಾಗೂ ಎಲ್ಲಾ ರೀತಿಯ ನ್ಯಾಯ ಪಂಚಾಯಿತಿಗಳು ಕರ್ನಾಟಕಕ್ಕೆ ತೀವ್ರ ಅನ್ಯಾಯವನ್ನು ಎಸಗುತ್ತಿರುವುದು ಜಗಜ್ಜಾಹೀರಾಗಿದೆ,

ನಮ್ಮ ಮನೆಯಲ್ಲಿ ನಾವು ಉಪವಾಸವಿದ್ದು ಇತರರಿಗೆ ಭೂರಿ ಭೋಜನ ನೀಡಬೇಕಾದಂತಹ ದಬ್ಬಾಳಿಕೆಗೆ ಈಡಾಗಿರುವುದು ಕಂಡು ಕೇಳರಿಯದ ಅನ್ಯಾಯದ ಸಂಗತಿ ಅಲ್ಲವೇ ? ಇಂತಹ ಕರ್ನಾಟಕ ವಿರೋಧಿ ಹಾಗೂ ಕರ್ನಾಟಕದ ಅಸ್ತಿತ್ವವೇ ಇಲ್ಲದಂತಾಗುವ ಬೆಳವಣಿಗೆಗಳನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಾಣುತ್ತಿದ್ದೇವೆ, ಈ ಮಹತ್ತರವಾದ ಅನ್ಯಾಯಗಳನ್ನು ಅತ್ಯಂತ ಕಟುವಾಗಿ, ಬಲವಾಗಿ ಖಂಡಿಸಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಎಂಬ ವಿಷಯಾಧಾರಿತವಾಗಿ ಎಲ್ಲರೂ ತಮ್ಮ ತಮ್ಮಲ್ಲಿನ ಉಳಿದ ವ್ಯತ್ಯಾಸಗಳನ್ನು ಮರೆತು ಪ್ರಪ್ರಥಮವಾಗಿ ಈ ಬಗ್ಗೆ ತಮ್ಮ ಗಮನವನ್ನು ನೀಡಬೇಕಾಗಿದೆ, ಎಲ್ಲರೂ ಈ ದಿಕ್ಕಿನಲ್ಲಿ ಶ್ರಮಿಸಬೇಕಾಗಿದೆ,


– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.

error: Content is protected !!