ಕುಡುಕರ ಸಂಖ್ಯೆ ಹೆಚ್ಚಿಸುವುದು ಆರನೇ ಗ್ಯಾರಂಟಿಯಾಗದಿರಲಿ

ಮಾನ್ಯರೇ,

ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯಿಂದಲೂ ಉತ್ಸುಕವಾಗಿರುವುದು ನಿಜಕ್ಕೂ ದುರಂತ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಇಂದಿಗೂ ಕೂಡ ಮದ್ಯ  ವ್ಯಸನಿಗಳು ಹೆಚ್ಚಾಗಿ, ಕುಟುಂಬವನ್ನು ನಿರ್ವಹಿಸಲಾರದಷ್ಟು ದುಸ್ಥಿತಿಗೆ ತಲುಪಿ, ಹೆಣ್ಣು ಮಕ್ಕಳಂತೂ ರೋಸಿ ಹೋಗಿದ್ದಾರೆ. ಕೆಲವರು ಚಿಕ್ಕ ವಯಸ್ಸಿಗೆ ಗಂಡನನ್ನೇ  ಕಳೆದುಕೊಂಡಿದ್ದಾರೆ. ಪಂಚಾಯಿತಿಗೊಂದು ಮದ್ಯದಂಗಡಿ ಪ್ರಾರಂಭಿಸಿದರೆ ಕುಡುಕರ ಸಂಖ್ಯೆ ಹೆಚ್ಚಾಗುತ್ತದೆ, ಹದಿ ಹರೆಯದವರೂ ಕೂಡ. 

ಇದರ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಅನುಮಾನವಿದ್ದರೆ ಮಾನ್ಯ ಮಂತ್ರಿ, ಮಹೋದಯರುಗಳು ಸಮೀಕ್ಷೆ ನಡೆಸಲಿ. ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು  ಜಾರಿಗೆ ತಂದಿದ್ದಾರೆ. ಇನ್ನೊಂದೆಡೆ ಅದೇ ಹಣವನ್ನು ಹಿಂಬಾಗಿಲ ಮೂಲಕ ಕಸಿಯುವ ಕೆಲಸಕ್ಕೆ ಕೈ ಹಾಕಿದರೆ ಈ ಯೋಜನೆಗಳು  ಸಾರ್ಥಕವಾಗುವುದಾದರೂ ಹೇಗೆ?

ಉಚಿತ ಯೋಜನೆಗಳ ಸಂಪನ್ಮೂಲ ಕ್ರೋಢೀಕರಣದ ಪರಿಣಾಮವಾಗಿ ಈಗಾಗಲೇ ಎಲ್ಲಾ ಬೆಲೆಗಳು ಗಗನಕ್ಕೇರಿವೆ ಮತ್ತು  ಇದರ ಮತ್ತೊಂದು ಭಾಗವೇ ಹೊಸ ಮದ್ಯದಂಗಡಿಗಳ ಪ್ರಸ್ತಾವನೆ. ಈಗಾಗಲೇ  ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಮಳೆ ಇಲ್ಲದೆ ಬೆಳೆಗಳು ಕೈಕೊಟ್ಟು ರೈತರ ಬದುಕು ಇನ್ನಷ್ಟು ಶೋಚನೀಯವಾಗುತ್ತಿದೆ. ರಾಜ್ಯದಲ್ಲಿ ಆಗಬೇಕಾಗುವಂತಹ ಅಭಿವೃದ್ಧಿ ಕೆಲಸಗಳು ಬಹಳಷ್ಟಿವೆ. ಅದನ್ನು ಬಿಟ್ಟು ಇಂತಹ ಮನೆ ಹಾಳು ಮಾಡುವಂತಹ ಯೋಜನೆಗಳಿಗೆ ಸರ್ಕಾರ ಕೈ ಹಾಕುವುದು ಬೇಡ. ಆದಾಗ್ಯೂ ಹಠಕ್ಕೆ ಬಿದ್ದು ಕೈ ಹಾಕಿದರೆ ಮುಂದೆ ಲೋಕಸಭಾ ಚುನಾವಣೆಯಲ್ಲಿ ಬರುವ ಮತಗಳು ಕೂಡ ಬರುವುದಿಲ್ಲ. ಇಷ್ಟು ದಿನ ಹೊರಡಿಸಿದಂತಹ ಜನಪ್ರಿಯ ಯೋಜನೆಗಳ  ಹೆಸರು  ಮಣ್ಣು ಪಾಲಾಗಿ, ಸರ್ಕಾರಕ್ಕೆ ಹೆಸರು ಬರುವುದಂತೂ ನಿಜ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ 


– ಮುರುಗೇಶ ಡಿ., ದಾವಣಗೆರೆ.

error: Content is protected !!